ಜಿಲ್ಲೆ

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

Vijayapura - Desk - Gurappa Lokuri

ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದಿಂದ ಸರಿಯಾಗಿ ವಿದ್ಯುತ್ ವಿತರಣೆಯಾಗುತ್ತಿಲ್ಲ ಎಂದು ಆರೋಪಿಸಿ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.

ಹಗಲು ಹೊತ್ತಿನಲ್ಲಿ ಏಳು ಗಂಟೆ ವಿದ್ಯುತ್ ವಿತರಿಸಬೇಕು. ಆದರೆ, ಪ್ರತಿ ಗಂಟೆಗೆ ವಿದ್ಯುತ್ ಕಡಿತವಾಗುವ ಮೂಲಕ ಕೇವಲ ಮೂರು ಗಂಟೆಯೂ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ದೂರಿದರು.

ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಗಾಳಿ ಬಹಳಷ್ಟಿದ್ದು, ಇದರಿಂದ ಎಲ್ಲಿಯಾದರೂ ಗಿಡಮರಗಳಿಂದ ತೊಂದರೆಯಾಗಿರಬೇಕೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ನಾವು ತಪಾಸಣೆ ಮಾಡುತ್ತಿದ್ದರೂ ಫಾಲ್ಟ್ ಎಲ್ಲಿದೆ ಎಂಬುದು ತಿಳಿಯುತ್ತಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಪದೇ ಪದೆ ವಿದ್ಯುತ್ ಕಡಿತದಿಂದಾಗಿ ರೈತರ ಪಂಪ್‌ಸೆಟ್ ಮೋಟಾರುಗಳು ಹಾಗೂ ಟ್ರಾನ್ಸ್‌ಫಾರ್ಮಗಳು ಸುಡುತ್ತಿವೆ ಎಂದು ದೂರಿದರು.

ತಾಲೂಕಿನಲ್ಲಿ ಅಂದಾಜು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇದೇ ಬಾರಿ ಕಬ್ಬು ಮತ್ತು ಕಳೆದ ಬಾರಿಯ ಕಬ್ಬು ಇದೆ. ಬೆಳೆಗೆ ನೀರಿನ ಅವಶ್ಯಕತೆ ಇದೆ. ಸದ್ಯ ರೈತರು ತೊಗರಿ, ಮೆಕ್ಕೆಜೋಳ ಸೇರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದ್ದು ಇತ್ತ ಮಳೆಯೂ ಬಾರದೇ ರೈತರು ತೊಂದರೆಯಲ್ಲಿದ್ದಾರೆ ಎಂದು ತಿಳಿಸಿದರು.

ಕೂಡಲೇ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮರ್ಪಕವಾಗಿ ವಿದ್ಯುತ್ ಪೂರೆಸುವಂತೆ ಭರವಸೆ ನೀಡಬೇಕೆಂದು ಪಟ್ಟು ಹಿಡಿದರಾದರೂ ಯಾವ ಅಧಿಕಾರಿಗಳೂ ಭೇಟಿ ನೀಡಲಿಲ್ಲ.

ಗುರು ಅಜಗೊಂಡ, ಪ್ರಭು ಗೋಳಸಾರ, ನಿಂಗು ಚಿಕ್ಕಮಣೂರ, ಬಸವರಾಜ ಹೊಸಮನಿ, ಗಡ್ಡೆಪ್ಪ ಆಳೂರ, ಮಲ್ಲು ಪರೀಟ್, ರಮೇಶ ಅರಸನವರ, ಸಿದ್ದು ಪೂಜಾರಿ, ಶಿವು ಇರಗೊಂಡ, ಪ್ರಫುಲ್ ಲಾಳಸಂಗಿ, ಸಂಜು ತಳವಾರ, ಅಮಸಿದ್ದ ಬಿರಾದಾರ, ಆನಂದ ಗೋಳಸಾರ, ಬಾಬು ಚಿಕ್ಕಮಣೂರ, ಅನೀಲ ಬಿಸನಾಳ, ಸಿದಗೊಂಡ ಪೂಜಾರಿ, ಕೃಷ್ಣಾ ಮಕಣಾಪುರ, ನಾಗು ಲಾಳಸಂಗಿ ಇತರರಿದ್ದರು.

ಇಂಡಿ 23-3:

ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ಹಿರೇಬೇವನೂರಿನ ರೈತರು ಕೆಇಬಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.