ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಶಾಲೆಯ ಅವಧಿಯಲ್ಲಿ ಹೆಚ್ಚುವರಿ ಬಸ್ ಓಡಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಸೋಮವಾರ ಬಸ್ ಸಂಚಾರ ತಡೆದು ಪ್ರತಿಭಟಿಸಿದರು. 
ಜಿಲ್ಲೆ

ಹೆಚ್ಚುವರಿ ಬಸ್ ನಿಯೋಜನೆಗೆ ಆಗ್ರಹ

ಶಿವಶಂಕರ್ ಎಂ. ಹೆಬ್ಬಳ್ಳ

 ಯಳಂದೂರು : ತಾಲೂಕಿನ ಹೊನ್ನೂರು ಗ್ರಾಮಕ್ಕೆ ಹೆಚ್ಚುವರಿ ಬಸ್ ನಿಯೋಜಿಸಬೇಕೆಂದು ಆಗ್ರಹಿಸಿ ಗ್ರಾಮದ ವಿದ್ಯಾರ್ಥಿಗಳು ಸೋಮವಾರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

ದಿನನಿತ್ಯ ಬೆಳಗ್ಗೆ, ಸಂಜೆ ವೇಳೆ ಕೊಳ್ಳೇಗಾಲ ಮೂಲಕ ಕಿನಕಹಳ್ಳಿ, ಬಸವಾಪುರ, ಕೆಸ್ತೂರು, ಮಲ್ಲಿಗೆಹಳ್ಳಿ ಮೂಲಕ ಹೊನ್ನೂರು ಗ್ರಾಮಕ್ಕೆ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್ ಯಳಂದೂರು ಪಟ್ಟಣಕ್ಕೆ ತೆರಳುತ್ತದೆ. ಅಲ್ಲಿಂದ ಬರುವಾಗ ಬಸ್ ತುಂಬ ಪ್ರಯಾಣಿಕರು ತುಂಬಿಕೊಂಡಿರುತ್ತಾರೆ. ಇದರಿಂದ ಹೊನ್ನೂರು ಗ್ರಾಮ ಸೇರಿದಂತೆ ಮುಂದಿನ ಹಳ್ಳಿಗಳಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತೊಂದು ಬಸ್ ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಹೋಗಲೇಬೇಕೆಂದರೆ ನೂಕುನುಗ್ಗಲು ಅಥವಾ ಬಸ್‌ನ ಡೋರ್‌ನಲ್ಲೇ ಜೋತುಬಿದ್ದು ಪ್ರಾಣಭಯದಲ್ಲೇ ಹೋಗುವ ಅನಿವಾರ್ಯತೆ ಎದುರಾಗಿದೆ ಎಂದು ಕಿಡಿ ಕಾರಿದರು.

ಆಟೋ, ಬೈಕ್‌ಗಳ ಮೂಲಕ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಿತ್ಯ ಸಮಸ್ಯೆಯಾಗಿದೆ. ಹಾಗಾಗಿ ಕಿನಕಹಳ್ಳಿ, ಕೆಸ್ತೂರು, ಹೊನ್ನೂರು ಮೂಲಕ ಯಳಂದೂರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ದೂರವಾಣಿಯ ಮೂಲಕ ಮಾಹಿತಿ ನೀಡಲಾಯಿತು. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ಈ ಸಂದರ್ಭದಲ್ಲಿ ಮನು, ಕಿಶೋರ್, ಮಹೇಶ್, ಆಕಾಶ್, ಮನೋಜ್, ಮಹದೇವ ಪ್ರಸಾದ್, ಅರ್ಜುನ್, ಸಚಿನ್, ಸಂತೋಷ್ ಸೇರಿದಂತೆ ಇತರರು ಹಾಜರಿದ್ದರು.