ಮೈಸೂರು: ಪಶ್ಚಿಮಘಟ್ಟ ಉಳಿಸಲು ರಾಜ್ಯ ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಪರಿಸರಕ್ಕಾಗಿ ನಾವು ಸಂಘಟನೆ ವತಿಯಿಂದ ಬುಧವಾರ ಧರಣಿ ನಡೆಸಲಾಯಿತು.
ನಗರದ ಗಾಂಧಿ ಚೌಕದ ಮುಂಭಾಗ ಜಮಾವಣೆಗೊಂಡ ಪರಿಸರ ಕಾರ್ಯಕರ್ತರು ನಾನಾ ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಪ್ರಕೃತಿಯನ್ನು ಹಾಳು ಮಾಡುವುದೇ ವಿಕೃತಿ’, ‘ಪ್ರಕೃತಿಯನ್ನು ಪೊರೆಯುವುದು ನಮ್ಮ ಸಂಸ್ಕೃತಿ’, ‘ಉಳಿಸಿ ಉಳಿಸಿ ಪಶ್ಚಿಮ ಘಟ್ಟ ಉಳಿಸಿ’, ‘ಅಳಿದರೆ ಪಶ್ಚಿಮ ಘಟ್ಟಗಳು ಸಂಪತ್ತು ಕಾದಿದೆ ಸಕಲ ಜೀವಿಗಳಿಗೆ ಆಪತ್ತು’, ‘ಜೀವನ ನದಿಗಳ ಉಗಮ ಸ್ಥಾನ ಪಶ್ಚಿಮ ಘಟ್ಟ ಪಶ್ಚಿಮ ಘಟ್ಟ’ ಎಂಬ ಫಲಕಗಳನ್ನು ಪ್ರದರ್ಶಿಸಿ ಪಶ್ಚಿಮ ಘಟ್ಟ ಉಳಿಸುವಂತೆ ಒತ್ತಾಯಿಸಿದರು.
ಇತ್ತೀಚೆಗೆ ಕೇರಳದಲ್ಲಿ ಹಾಗೂ ಕರ್ನಾಟಕದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಗುಡ್ಡಗಳು ಕುಸಿದು, ರಾತ್ರಿ- ಬೆಳಗಾಗುವುದರೊಳಗೆ ಮಕ್ಕಳು ತಾಯಂದಿರು ಸೇರಿದಂತೆ ನೂರಾರು ಜನರ ಪ್ರಾಣ, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಕೊಚ್ಚಿ ಹೋಯಿತು. ಉತ್ತರ ಭಾರತದ ಹಿಮಾಚಲ ಪ್ರದೇಶ ಮತ್ತು ಉತ್ತರ ಖಂಡದಲ್ಲೂ ಹಲವು ಭೂ ಕುಸಿತಗಳಾಗಿವೆ. ಈ ಅನಾಹುತಗಳಿಗೆ ಪ್ರಕೃತಿ ಮೇಲೆ ಮಾನವನ ಅತಿಯಾದ ದಬ್ಬಾಳಿಕೆಯೇ ಕಾರಣ ಎಂದರು.
ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ರೆಸಾರ್ಟ್, ಹೋಂ ಸ್ಟೇ, ಅಕ್ರಮ ಹೋಟೆಲ್‌ಗಳ ನಿರ್ಮಾಣ, ರಸ್ತೆ ಅಗಲೀಕರಣಕ್ಕೆ ಮರಗಳ ಕಡಿತ, ನೀರಿನ ಸಹಜವಾಗಿ ಹರಿಯುವಿಕೆಗೆ ತಡೆ ಸೇರಿದಂತೆ ಅನೇಕ ಕಾರಣಗಳಿಂದ ಮಣ್ಣಿನ ಸವಕಳಿಗೂ ಕಾರಣವಾಗುತ್ತಿದೆ. ಸರ್ಕಾರ ಪರಿಸರಕ್ಕೆ ಹಾನಿ ಉಂಟು ಮಾಡುವ ಇತಂಹ ಚಟುವಟಿಕೆಗಳನ್ನು ತಡೆಗಟ್ಟಲು ಯಾವುದೇ ಗಂಭೀರ ಪ್ರಯತ್ನಗಳನ್ನು ಮಾಡದೇ ದುರಂತ ಘಟಿಸಿದ ನಂತರ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮ್ಮತೆ ಮತ್ತು ಅದರ ಜಾಗತಿಕ ಮಹತ್ವವನ್ನು ಅರಿತು ಪ್ರೊ.ಮಾಧವ ಗಾಡ್ಗೀಳ್ ಸಮಿತಿ 2011ರಲ್ಲಿ ಸಲ್ಲಿಸಿದ ವರದಿಯಲ್ಲಿ ಅಲ್ಲಿಗೆ ಹಾನಿ ಮಾಡುವಂತ ಯಾವುದೇ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕೆಂದು ಶಿಫಾರಸು ಮಾಡಿದ್ದರು. ಈ ವರದಿಯ ಪ್ರಕಾರ ಪ್ರಮುಖವಾಗಿ ಪಶ್ಚಿಮ ಘಟ್ಟ ಪ್ರಾಧಿಕಾರ ರಚಿಸಬೇಕು. ಸೂಕ್ಷ್ಮ ಪರಿಸರ ವಲಯಗಳನ್ನು ಘೋಷಿಸಿ, ಈ ವಲಯಗಳಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಯನ್ನು ನಿಷೇಧಿಸಬೇಕು ಹಾಗೂ ಕಟ್ಟಡ ನಿರ್ಮಾಣ, ಮೂಲಸೌಕರ್ಯ ನಿರ್ಮಾಣ ನಿರ್ಬಂಧಿಸುವುದು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ ಈ ವರದಿಯನ್ನು ಜಾರಿಗೊಳಿಸಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪರಿಸರ ಕಾರ್ಯಕರ್ತರಾದ ಮೇಜರ್ ಜನರಲ್ ಒಂಬತ್ಕೆರೆ, ಕಾಳೇಗೌಡ ನಾಗವಾರ, ಕಾಳ ಚೆನ್ನೇಗೌಡ, ಹೊರೆಯಾಲ ದೊರೆಸ್ವಾಮಿ, ಭಾನು ಮೋಹನ್, ಲೀಲಾ ಶಿವಕುಮಾರ್, ಪರಶುರಾಮೇಗೌಡ, ಭಾಗ್ಯ ಶಂಕರ್, ಗಂಟಯ್ಯ, ಸುಮಲತಾ, ಶೈಲಜೇಶ್ ಇತರರಿದ್ದರು.
ಚಿತ್ರ ಸಂಖ್ಯೆ…20