ಜಿಲ್ಲೆ

ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ

reportermys

ಮಡಿಕೇರಿ: ಸುಳ್ಳು ದಾಖಲೆ ಸೃಷ್ಟಿಸಿ ಜಾತಿ ಪ್ರಮಾಣ ಪತ್ರ ಪಡೆದ ವ್ಯಕ್ತಿಗಳ ಪೂರಕ ದಾಖಲೆಗಳನ್ನು ಪರಿಶೀಲಿಸದೆ ಸುಳ್ಳು ಜಾತಿ ಪ್ರಮಾಣ ಪತ್ರ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ರಾಮನಹಳ್ಳಿ ಜೈ ಬೀಮ್ ಯುವಕ ಸಂಘದ ಸದಸ್ಯ ಹಾಗೂ ಗ್ರಾಮಸ್ಥ ಆರ್.ಆರ್.ಪ್ರವೀಣ್ ಕುಮಾರ್ ಒತ್ತಾಯಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರಪೇಟೆ ತಾಲೂಕಿನ ರಾಮನಹಳ್ಳಿ ಗ್ರಾಮದಲ್ಲಿ ಹಿಂದೂ ಹೆಗ್ಗಡಿಗೌಡ ಜನಾಂಗಕ್ಕೆ ಸೇರಿದ ಆರ್.ಎಚ್.ಪುಟ್ಟಸ್ವಾಮಿ ಹಾಗೂ ಆರ್.ಎಚ್.ಹೊನ್ನಪ್ಪ ಎಂಬವರು ಸುಳ್ಳು ದಾಖಲೆ ಸೃಷ್ಟಿಸಿ ಬುಡಕಟ್ಟು ಪರಿಶಿಷ್ಟ ಪಂಗಡ (ಕುರುಬ) ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಈ ಇಬ್ಬರ ಶಾಲಾ ದಾಖಲಾತಿಗಳಲ್ಲಿ ಹಿಂದೂ ಹೆಗ್ಗಡಿಗೌಡ ಎಂದು ದಾಖಲಾಗಿದೆ. ಈ ಬಗ್ಗೆ ಮಾಹಿತಿ ಹಕ್ಕು ಅಡಿಯಲ್ಲಿ ಕೇಳಿದ ಸಂದರ್ಭ ಸಮಾಜ ಕಲ್ಯಾಣ ಇಲಾಖೆ ಉಪನಿದೇರ್ಶಕರು ಪರಿಶಿಷ್ಟ ಜಾತಿ, ವರ್ಗಗಳ ಜಾತಿ ಪಟ್ಟಿಯಲ್ಲಿ ಹೆಗ್ಗಡಿಗೌಡ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಆದ್ದರಿಂದ ಈ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಅಮಾನ್ಯ ಮಾಡಬೇಕು ಎಂದು ಆಗ್ರಹಿಸಿದರು.


ಪ್ರಮಾಣಪತ್ರ ಬಳಸಿ ಇವರೆಗೆ ಪಡೆದುಕೊಂಡಿರುವ ಎಲ್ಲಾ ಉಪಯೋಗಗಳನ್ನು ಹಿಂಪಡೆಯಬೇಕು. ಅರ್ಜಿ ಸಲ್ಲಿಸಿದ ಸಮಯದಲ್ಲಿ ಜಾತಿ ಪ್ರಮಾಣ ಪತ್ರದ ಅರ್ಜಿಗಳನ್ನು ಪರಿಶೀಲಿಸದೆ ಪತ್ರವನ್ನು ಮಾನ್ಯ ಮಾಡಿದ ಗ್ರಾಮಲೆಕ್ಕಿಗ, ಕಂದಾಯ ಪರೀವಿಕ್ಷಕ ಹಾಗೂ ತಹಶೀಲ್ದಾರ್‌ರನ್ನು ಕರ್ತವ್ಯದಿಂದ ವಜಾಗೊಳಿಸಬೇಕು. ಇವರ ಕರ್ತವ್ಯ ಸಮಯದಲ್ಲಿ ಮಾನ್ಯ ಮಾಡಿರುವ ಎಲ್ಲಾ ಜಾತಿ ಪ್ರಮಾಣ ಪತ್ರವನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದರು.


ಉಳ್ಳವರು ಇಂತಹ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವುದರಿಂದ ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ಕೈ ಸೇರದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ನೀಡಲಾಗಿದ್ದು, ತಕ್ಷಣ ಸ್ಪಂದನೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕರವೇ ಕಾರ್ಯಕರ್ತರು, ಜೈ ಬೀಮ್ ಯುವಕ ಸಂಘದ ಪದಾಧಿಕಾರಿಗಳು ಮತ್ತು ರಾಮನಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.


ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಆರ್.ಎಸ್.ರಮೇಶ್, ಸದಸ್ಯರಾದ ಆರ್.ಎಸ್.ಸಂದೀಪ್, ಆರ್.ಸಿ.ಶರತ್, ಗ್ರಾಮಸ್ಥರಾದ ಎಂ.ಸಿ.ಅರುಣ್ ಕುಮಾರ್, ಎಂ.ಸಿ.ಲೋಕೇಶ್ ಉಪಸ್ಥಿತರಿದ್ದರು.