ಯಲ್ಲಾಪುರ: ತಾಲೂಕಿನ ಆನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಟುಕಮನೆ ಬಳಿ ಅರಣ್ಯ ನಾಶ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ಪ್ರಮುಖರು ಡಿಸಿಎಫ್ ಅವರಿಗೆ ಮನವಿ ಸಲ್ಲಿಸಿದರು.
ಹುಟುಕಮನೆ ಬಳಿ ಬೃಹತ್ ಗುಡ್ಡ ಕತ್ತರಿಸಿ, ಅರಣ್ಯ ನಾಶ ಮಾಡಲಾಗಿದ್ದು, ನಮ್ಮ ದೂರಿನನ್ವಯ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರ ವಶಪಡಿಸಿಕೊಂಡಿದ್ದರು. ಆದರೆ, ಅರಣ್ಯ ನಾಶಕ್ಕೆ ಬಳಕೆಯಾದ ಟ್ರ್ಯಾಕ್ಟರ್, ಟಿಪ್ಪರ್, ಅದರ ಚಾಲಕರು, ಮಾಲೀಕರ ವಿರುದ್ಧ ಕ್ರಮ ಆಗಿಲ್ಲ. ಮಣ್ಣಿನಲ್ಲಿ ಹೂತಿಟ್ಟ ಮರಗಳನ್ನು ಹೊರತೆಗೆದಿಲ್ಲ. ಕೃತ್ಯದಲ್ಲಿ ಭಾಗಿಯಾದ ಜೆಸಿಬಿ ಮಾಲೀಕರು, ಚಾಲಕರನ್ನು ಪ್ರಕರಣದಿಂದ ಕೈಬಿಟ್ಟ ಅನುಮಾನವಿದೆ. ಹೂತಿಟ್ಟ ಬೆಲೆ ಬಾಳುವ ಮರಗಳನ್ನು ಅಲ್ಲಿಂದ ಸಾಗಿಸುವ ಸಾಧ್ಯತೆ ಇರುವುದರಿಂದ ತಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಧೀರಜ ತಿನೆಕರ, ಶಂಶುದ್ದೀನ್ ಮಾರ್ಕರ್, ಮಂಜುನಾಥ ಹೆಗಡೆ, ಎ.ಆರ್. ಶೇಖ್, ಇತರರಿದ್ದರು.