ಜಿಲ್ಲೆ

ದೇವಾಡಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕಳೆದ 2 ವರ್ಷಗಳಿಂದ ದೇವಾಡಿಗ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಬೇಡಿಕೆ ಸಲ್ಲಿಸುತ್ತಿದ್ದರೂ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಸಮಾಜದಲ್ಲಿ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ದೇವಾಡಿಗ ಸಮಾಜಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿವಿಧ ಸಚಿವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಈಡೇರಿಸುವಂತೆ ಕೋರಲಾಗಿದೆ. ರಾಜ್ಯದಲ್ಲಿ ಸುಮಾರು 6 ರಿಂದ 7 ಲಕ್ಷ ಜನಸಂಖ್ಯೆ ಹೊಂದಿರುವ ದೇವಾಡಿಗ ಸಮಾಜ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ 38 ಸಾವಿರ ಮತದಾರರನ್ನು ಹೊಂದಿದ್ದು, ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಹೀಗಾಗಿ ಉ.ಕ. ಉಡುಪಿ ಮತ್ತು ದ.ಕ. ಸೇರಿದಂತೆ ಕರಾವಳಿಯ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಮುಖ್ಯ ಹುದ್ದೆಯಲ್ಲಿರುವ ದೇವಾಡಿಗ ಸಮಾಜದ ಮುಖಂಡರಿಗೆ ಟಿಕೇಟ್ ನೀಡಬೇಕು. ಎಲ್ಲಾ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ದೇವಾಡಿಗ ಸಮಾಜದವರನ್ನು ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿ ಮೋಹನ್‌ದಾಸ್ ಹಿರಿಯಡ್ಕ, ಕಾರ್ಯದರ್ಶಿ ಗಣೇಶ್ ದೇವಾಡಿಗ, ಸುದರ್ಶನ್ ಶೇರಿಗಾರ್, ರತ್ನಾಕರ ಜಿ.ಎನ್. ಉಪಸ್ಥಿತರಿದ್ದರು.