ಜಿಲ್ಲೆ

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

ಹಿರೇಕೆರೂರ: ಹಾನಗಲ್ಲ ತಾಲೂಕಿನ ನಾಲ್ಕರ್ ಕ್ರಾಸ್ ಬಳಿ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದವರನ್ನು ಗಲ್ಲಿಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರ್ ಕಚೇರಿ ಶಿರಸ್ತೆದಾರ ಎಸ್.ವಿ. ಆಪಿನಕೊಪ್ಪ ಮೂಲಕ ರಾಜ್ಯ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಹನುಮಂತಪ್ಪ ದಿವಗೀಹಳ್ಳಿ ಮಾತನಾಡಿ, ಬೆಳಗಾವಿಯ ಉದ್ಯಾನದಲ್ಲಿ ಕೆಲ ದಿನಗಳ ಹಿಂದೆ ಬೇರೆ ಬೇರೆ ಕೋಮಿನ ಯುವಕ-ಯುವತಿ ಪರಸ್ಪರ ಮಾತನಾಡುತ್ತಿದ್ದ ಸಮಯದಲ್ಲಿ ಕೆಲ ಯುವಕರು ಹಲ್ಲೆ, ಹಾನಗಲ್ಲ ತಾಲೂಕಿನ ನಾಲ್ಕರ್ ಕ್ರಾಸ್ ಬಳಿ ಏಳು ಜನರ ಗುಂಪು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದು ಖಂಡನೀಯವಾಗಿದೆ. ಈ ಆರೋಪಿಗಳನ್ನು ಕೂಡಲೇ ಬಂಧಿಸಿ, ಅವರನ್ನು ಗಲ್ಲಿಗೇರಿಸಬೇಕು. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ಮುಂಜಾಗ್ರತೆ ವಹಿಸಬೇಕು. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಕಳೆದರೂ ಮಹಿಳೆಯರಿಗೆ ನಿರ್ಭೀತಿಯಿಂದ ಓಡಾಡಲು ಆಗುತ್ತಿಲ್ಲ. ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸು ಕನಸಾಗಿ ಉಳಿದಿದೆ. ತಾಲೂಕಿಗೆ ಒಂದು ಪ್ರತ್ಯೇಕ ಪೋಲಿಸ್ ಠಾಣೆ ಸ್ಥಾಪಿಸಬೇಕು. ಅತಿ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗರತ್ನಮ್ಮ ಬಡನಾಯಕ, ಜಿಲ್ಲಾಧ್ಯಕ್ಷ ಚಂದ್ರಪ್ಪ ಮಾನೇರ, ಲಿಲಿತಮ್ಮ ಮಠದ, ಗುತ್ತೆವ್ವ ಸುಣಗಾರ, ಬಸವರಾಜ ಕೋಡಿಹಳ್ಳಿ, ಕಾವ್ಯಾ ಹುಡೇದ, ಪೂಜಾ ಎಚ್.ಎಂ., ಇಂದ್ರಮ್ಮ ಬತ್ತಿಕೊಪ್ಪ, ರುದ್ರವ್ವ ಸಾತೇನಹಳ್ಳಿ, ರೇಣುಕಾ ಸೋಮಣ್ಣನವರ ಹಾಗೂ ರೈತರು ಇದ್ದರು.