ಚಿಕ್ಕಮಗಳೂರು: ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಮೂಳೆತಜ್ಞ ಡಾ. ಬಿ.ಎಸ್.ವೆಂಕಟೇಶ್ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲಾ ಕನಕ ನೌಕರರ ಸಂಘದ ಪದಾಧಿಕಾರಿಗಳು ಎಸ್‌ಪಿ ಜಿತೇಂದರ್ ಕುಮಾರ್ ದಹೀಮ ಅವರಿಗೆ ಮನವಿ ಸಲ್ಲಿಸಿದರು.
ವೈದ್ಯರ ಮೇಲೆ ಆರೋಪಿಗಳು ಅನಗತ್ಯವಾಗಿ ಹಲ್ಲೆ ಮಾಡಿದ್ದಾರೆ. ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಮಾಡುವ ಮೂಲಕ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ವೈದ್ಯರ ಕೊರಳ ಪಟ್ಟಿ ಹಿಡಿದು ಎಳೆದಾಡಿ ಚಪ್ಪಲಿಯಿಂದ ಹಲ್ಲೆ ನಡೆಸುವ ಮೂಲಕ ಅಮಾನುಷವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಕರ್ತವ್ಯ ನಿರತರ ಮೇಲೆ ಹಲ್ಲೆ ನಡೆಸಿದರೆ ವೈದ್ಯರು ಕರ್ತವ್ಯವನ್ನು ನಿರ್ವಹಿಸುವುದು ಹೇಗೆ ಎಂದು ಪ್ರಶ್ನಿಸಿದ ಅವರು ಈ ಕೃತ್ಯ ಖಂಡನೀಯ ವಾಗಿದ್ದು ಯಾವುದೇ ಮುಲಾಜಿಗೂ ಒಳಗಾಗದೇ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಂತಹ ಕೃತ್ಯಗಳು ಮರುಕಳಿಸದಂತೆ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ.ಎಚ್.ಪ್ರಹ್ಲಾದ, ಉಪಾಧ್ಯಕ್ಷ ಲಕ್ಕಿ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಸುರೇಶ್, ಸಂಘಟನಾ ಕಾರ್ಯದರ್ಶಿ ಸಿ.ಸಿ.ರಂಗಣ್ಣ, ಸಹಕಾರ್ಯದರ್ಶಿ ಡಿ.ಪ್ರಕಾಶ್ ಉಪಸ್ಥಿತರಿದ್ದರು.