ಜಿಲ್ಲೆ

ಸಿಡಿಪಿಒ ವಿರುದ್ಧ ಕ್ರಮಕ್ಕೆ ಆಗ್ರಹ

ಉತ್ತರ ಕನ್ನಡ ಡೆಸ್ಕ್

ರೋಣ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಮುಖಂಡರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಯ್ಯ ಹಿರೇಮಠ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಕಳೆದ ವರ್ಷ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತಾಗಿ ತಾಲೂಕು ಆಡಳಿತ ವಿವಿಧ ಇಲಾಖೆಗಳಿಗೆ ಕಾರ್ಯಕ್ರಮ ಆಯೋಜನೆಯ ಕುರಿತು ಜವಾಬ್ದಾರಿ ವಹಿಸಿತ್ತು. ಈ ಕುರಿತು ಎಸ್‌ಟಿ ಮುಖಂಡರು ತಮಗೆ ವಹಿಸಿದ ಜವಾಬ್ದಾರಿ ನಿಭಾಯಿಸುವಂತೆ ಕೇಳಲು ಹೋದಾಗ ಸಮಾಜದ ಮುಖಂಡರಿಗೆ ಅವಮಾನ ಮಾಡಿದ್ದಾರೆ. ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿಡಿಪಿಒ ವಿರೂಪಾಕ್ಷಯ್ಯ ಹಿರೇಮಠ ಮಾತನಾಡಿ, ಕಳೆದ ವರ್ಷ ನಮ್ಮ ಇಲಾಖೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದರಿಂದ ನಮಗೆ ಕಾರ್ಯಕ್ರಮಕ್ಕೆ ವಹಿಸಿದ್ದ ಜವಾಬ್ದಾರಿ ನಿಭಾಯಿಸುವಲ್ಲಿ ತೊಂದರೆ ಉಂಟಾಯಿತು ಎಂದರು. ಮಧ್ಯಪ್ರವೇಶಿದ ತಹಸೀಲ್ದಾರ್ ನಾಗರಾಜ ಕೆ., ಜಯಂತಿ ಆಚರಣೆ ಕುರಿತು ತಾಲೂಕು ಆಡಳಿತ ಆಯಾ ಇಲಾಖೆಗಳಿಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದರು.
ನೀರಾವರಿ ಇಲಾಖೆ ಅಧಿಕಾರಿ ಸಂವಿಧಾನ ಪೀಠಿಕೆಯನ್ನು ಕಚೇರಿಯ ಸೂಕ್ತ ಸ್ಥಳದಲ್ಲಿ ಹಾಕದೆ, ಅವಮಾನ ಮಾಡಿದ್ದಾರೆ ಎಂದು ಮುಖಂಡರಾದ ಮೌನೇಶ ಹಾದಿಮನಿ, ವೀರಪ್ಪ ತೆಗ್ಗಿನಮನಿ ದೂರಿದರು.

ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕಾಧ್ಯಕ್ಷ ಬಸವರಾಜ ತಳವಾರ ಮಾತನಾಡಿ, ಅ.21ರಂದು ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.