ಜಿಲ್ಲೆ

ಕೆಎಂಸಿಗೆ ಡ್ರೋಣ್​ ಮೂಲಕ ಫ್ರೋಜನ್​ ಮಾದರಿ ರವಾನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಮಣಿಪಾಲ್​ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ಮತ್ತು ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ ಜಂಟಿಯಾಗಿ ಡ್ರೋನ್​ಗಳನ್ನು ಬಳಸಿಕೊಂಡು ವೈಮಾನಿಕ ಆರೋಗ್ಯ ಸಾರಿಗೆ ವ್ಯವಸ್ಥೆ ಪ್ರಾರಂಭಿಸಿದೆ. ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಫ್ರೋಜನ್​ ಮಾದರಿ (ಸ್ಯಾಂಪಲ್​) ರವಾನಿಸಲಾಯಿತು.

ಕರ್ನಾಟಕದ ಪೆರಿಫೆರಲ್​ ಮತ್ತು ಟರ್ಷಿಯರಿ ಕೇರ್​ ಆಸ್ಪತ್ರೆಗಳ ನಡುವೆ ಆಂಕೊಪಾಥೋಲಾಜಿಕಲ್​ ಮಾದರಿ (ಸ್ಯಾಂಪಲ್​)ಗಳನ್ನು ಸಾಗಿಸಲು ಡ್ರೋನ್​ಗಳನ್ನು ಬಳಸಿಕೊಳ್ಳುವ ಗುರಿಯನ್ನು ಈ ಯೋಜನೆ ಹೊಂದಿದೆ. ಗ್ರಾಮೀಣ ಪ್ರದೇಶಗಳಿಂದ ಇಂಟ್ರಾಆಪರೇಟಿವ್​ ಮಾದರಿ (ಸ್ಯಾಂಪಲ್​ ) ಸಾಗಾಟಕ್ಕೆ ಅನೇಕ ತೊಡಕುಗಳಿದ್ದು, ಡ್ರೋನ್​ಗಳನ್ನು ಬಳಸಿಕೊಳ್ಳುವ ಮೂಲಕ ತ್ವರಿತವಾಗಿ ಸಾಗಿಸಬಹುದು. ಶ್ರೀ ರೋಗರ್ನಿಣಯ ಕೈಗೊಳ್ಳಬಹುದು.

ಕಾರ್ಯಕ್ರಮದಲ್ಲಿ ಐ ಸಿ ಎಂ ಆರ್​ ಆರೋಗ್ಯ ಸಂಶೋಧನಾ ವಿಭಾಗದ ಪ್ರಧಾನ ಕಾರ್ಯರ್ಶಿ ಡಾ. ರಾಜೀವ್​ ಬಹ್ಲ್​, ಮಹಾನಿರ್ದೇಶಕ ಡಾ. ಅತುಲ್​ ಗೋಯೆಲ್​ ಮುಖ್ಯ ಅತಿಥಿಗಳಾಗಿದ್ದರು. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್​.ಎಸ್​ ಬಲ್ಲಾಳ್​ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಮಹಾನಿರ್ದೇಶಕ ಡಾ. ಸಂಘಮಿತ್ರ ಪತಿ, ಜಂಟಿ ಕಾರ್ಯದರ್ಶಿ ಅನು ನಗರ್​ , ಡಾ. ಕಾಮಿನಿ ವಾಲಿಯಾ, ಮಾಹೆ ಕುಲಪತಿ (ಡಾ) ಎಂ.ಡಿ ವೆಂಕಟೇಶ್​, ಸಹ ಕುಲಪತಿ ಡಾ. ಶರತ್​ ಕೆ ರಾವ್​, ಡಾ ನಾರಾಯಣ ಸಭಾಹಿತ್​, ಡಾ.ಗಿರಿಧರ್​ ಕಿಣಿ, ಡಾ. ಪದ್ಮರಾಜ್​ ಹೆಗ್ಡೆ, ಡಾ. ಆನಂದ್​ ವೇಣುಗೋಪಾಲ್​, ಡಾ ಅರುಣ್​ ಮಯ್ಯ , ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್​ ಶೆಟ್ಟಿ, ಡಾ. ಕುಲದೀಪ್​ ನಿಗಮ್​ ಉಪಸ್ಥಿತರಿದ್ದರು.

ಐಸಿಎಂಆರ್​ನ ವಿಜ್ಞಾನಿ ಮತ್ತು ಕಾರ್ಯಕ್ರಮ ಅಧಿಕಾರಿ ಡಾ. ಸುನಿಲ್​ ಅಗರ್ವಾಲ್​ ಸ್ವಾಗತಿಸಿದರು. ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ ವಂದಿಸಿದರು.