ಜಿಲ್ಲೆ

ಪೊಲೀಸ್ ಸಿಬ್ಬಂದಿಗೆ ಮಿಸ್ಟಿ ಹಿಲ್ಸ್‌ನಿಂದ ಊಟ ವಿತರಣೆ

ಮಡಿಕೇರಿ: ಲಾಕ್‌ಡೌನ್ ಸಂದರ್ಭದಲ್ಲಿ ಅವಿರತವಾಗಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಸಿಬ್ಬಂದಿಗೆ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್‌ನಿಂದ ಮಂಗಳವಾರ ಊಟ ವಿತರಿಸಲಾಯಿತು.

ಲಾಕ್‌ಡೌನ್ ಸಂದರ್ಭ ಜನರ ಸಂಚಾರ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಪೊಲೀಸರು ನಿರಂತರ ಶ್ರಮ ವಹಿಸಿದ್ದಾರೆ. ಇದನ್ನು ಪರಿಗಣಿಸಿ ಮಿಸ್ಟಿ ಹಿಲ್ಸ್‌ನಿಂದ ಪೊಲೀಸರಿಗೆ 18 ದಿನ ಉತ್ತಮ ಊಟ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸರ ಕರ್ತವ್ಯ ಕಾರ್ಯವೈಖರಿಯನ್ನು ಮಿಸ್ಟಿ ಹಿಲ್ಸ್ ತಂಡ ಪ್ರಶಂಸೆ ವ್ಯಕ್ತಪಡಿಸಿತು ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಗದೀಶ್ ಪ್ರಶಾಂತ್ ತಿಳಿಸಿದರು.

ಲಾಕ್‌ಡೌನ್ ಸಂದರ್ಭ ಸಭೆಗಳನ್ನು ನಡೆಸಲಾಗದ ಹಿನ್ನೆಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್‌ನಿಂದ ಪ್ರತಿ ಮಂಗಳವಾರ ರೋಟರಿ ಸಭೆಗಳನ್ನು ಎರಡು ತಿಂಗಳಿನಿಂದ ಇ-ಸಭೆಗಳಾಗಿ ಪರಿವರ್ತಿಸಲಾಗಿದೆ. ಪ್ರತಿ ಮಂಗಳವಾರ ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ಮಿಸ್ಟಿ ಹಿಲ್ಸ್ ಸದಸ್ಯರು ವಾಟ್ಸಾ ಆ್ಯಪ್ ಗ್ರೂಪ್‌ನಲ್ಲಿ ಆಯೋಜಿತ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಮಿಸ್ಟಿ ಹಿಲ್ಸ್ ಇ-ಸಭೆಗಳ ಮೂಲಕ ರೋಟರಿಯಲ್ಲಿ ಕಡ್ಡಾಯವಾಗಿ ಸಭೆ ನಡೆಸಬೇಕಾದ ನಿಯಮವನ್ನು ಜಾರಿಯಲ್ಲಿಟ್ಟಿರುವುದು ಪ್ರಶಂಸನೀಯ. ಈ ಮೂಲಕ ಸೇವಾ ಸಂಸ್ಥೆಯಾದ ರೋಟರಿಯು ಲಾಕ್‌ಡೌನ್ ಸಂದರ್ಭ ಅಗತ್ಯವಿರುವ ಜನಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಇ-ಸಭೆಗಳು ನೆರವಾಗಿದೆ ಎಂದು ರೋಟರಿ ವಲಯ ಸಹಾಯಕ ಗವರ್ನರ್ ಪಿ.ನಾಗೇಶ್ ಪ್ರಶಂಶಿಸಿದ್ದಾರೆ.