ಬೆಂಗಳೂರು: ಹಿಟ್ ಆ್ಯಂಡ್ ರನ್ಗೆ ಯುವಕರಿಬ್ಬರು ಮಂಗಳವಾರ ರಾತ್ರಿ ಬಲಿಯಾಗಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಅಪಘಾತದ ದೃಶ್ಯ ಬೆಚ್ಚಿಬೀಳಿಸುವಂತಿದೆ.
ಮಂಜುನಾಥ್ ನಗರದ ನಿವಾಸಿಗಳಾದ ಗೌತಮ್ ಮತ್ತು ಶ್ರೀಕಾಂತ ಮೃತರು. ಸ್ವಿಗ್ಗಿ ಡೆಲಿವರಿ ಬಾಯ್ಗಳಾಗಿ ಕೆಲಸ ಮಾಡುತ್ತಿದ್ದ ಇವರು ನಿನ್ನೆ ರಾತ್ರಿ, ಜಾಲಹಳ್ಳಿ ವಿಲೇಜ್ ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ಊಟ ಡೆಲಿವರಿ ಕೊಟ್ಟು ವಾಪಸ್ ಹೊರಡಲೆಂದು ಬೈಕ್ ಹತ್ತಿದ ಕೆಲವೇ ಕ್ಷಣದಲ್ಲಿ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಿಂದ ಮೇಲಕ್ಕೆ ಹಾರಿ ಕೆಳಗೆ ಬಿದ್ದ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಹಸಿದವರ ಹೊಟ್ಟೆ ತುಂಬಿಸಲು ಹೋಗಿದ್ದವರು ಮಾರ್ಗಮಧ್ಯೆ ದುರ್ಮರಣಕ್ಕೀಡಾದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಘಟನೆ ಸಂಭವಿಸಿ 24 ತಾಸು ಮುಗಿಯುವಲ್ಲಿ ಆ ಕಾರನ್ನು ಪತ್ತೆ ಹಚ್ಚಿದ್ದಾರೆ.
ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಿಟ್ ಆ್ಯಂಡ್ ರನ್ ಕೇಸ್ನ ಬೆನ್ನುಬಿದ್ದ ಪೊಲೀಸರಿಗೆ ಅಪಘಾತ ನಡೆದ ಸ್ಥಳದಲ್ಲಿ ನಂಬರ್ ಪ್ಲೇಟ್ನ ಚೂರು ಸಿಕ್ಕಿತ್ತು. ಇದನ್ನೇ ಇಟ್ಟುಕೊಂಡು ಕಾರಿನ ನಂಬರ್ ಪತ್ತೆ ಹಚ್ಚಿದ್ದಾರೆ. ಸುಮಾರು 15 ಕಾರುಗಳ ಪರಿಶೀಲನೆ ಬಳಿಕ ಅಪಘಾತವೆಸಗಿದ ಕಾರಿನ ಮಾಲೀಕ ಸಿಕ್ಕಿದ್ದಾನೆ. ಮಾದನಾಯಕನಹಳ್ಳಿಯ ಭರತ್ ಎಂಬಾತನಿಗೆ ಈ ಕಾರು ಸೇರಿದ್ದು, ಅಪಘಾತದ ಬಳಿಕ ಮಾದಾವರ ಬಳಿ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ನನ್ನ ಕಾರನ್ನು ಸ್ನೇಹಿತ ತೆಗೆದುಕೊಂಡು ಹೋಗಿದ್ದ ಎಂದು ಮಾಲೀಕ ಭರತ್, ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ. ಕಾರು ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.