ಕಿಕ್ಕೇರಿ: ಕಾಂಗ್ರೆಸ್ ಸರ್ಕಾರ ಜನತೆಗೆ ಪಂಚ ಭಾಗ್ಯಗಳನ್ನು ನೀಡಿದ್ದು, ಅದನ್ನು ಮನೆ, ಮನಗಳಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಸಲಹೆ ನೀಡಿದರು.
ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗಾಗಿ ನುಡಿದಂತೆ ಎಲ್ಲ ಭಾಗ್ಯಗಳನ್ನು ನೀಡಿದೆ. ಇದು ಮುಂದಿನ ಲೋಕಸಭೆ ಚುನಾವಣೆ ಗೆಲುವಿಗೆ ಚುಕ್ಕಾಣಿಯಾಗಿದೆ. ವಿಧಾನಸಭೆಯಲ್ಲಿ ಕೆ.ಆರ್.ಪೇಟೆ ತಾಲೂಕು ಹೊರತುಪಡಿಸಿ ಜಿಲ್ಲೆಯ ಎಲ್ಲ ಕ್ಷೇತ್ರವೂ ಕಾಂಗ್ರೆಸ್ ಆಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ನೀಡಿರುವ ಭಾಗ್ಯಗಳಿಂದ ಜನರಿಗೆ ಆಗುತ್ತಿರುವ ಉಪಯೋಗ ತಿಳಿಸಿದರೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎಂದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಮಹಿಳೆಯರು ಪರಸ್ಥಳಕ್ಕೆ ತೆರಳಲು ಕಷ್ಟವಾಗಿತ್ತು. ವಿದ್ಯುತ್ ಬಿಲ್ ಪಾವತಿ ಮಾಡಲು ಹೆಣಗಾಟ, ಕೌಟುಂಬಿಕ ನಿರ್ವಹಣೆಗೆ ಪರದಾಟ ಎಲ್ಲವೂ ಕಾಡುತ್ತಿತ್ತು. ನೆಮ್ಮದಿಯಿಂದ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವಂತಾಗಿದೆ. ನಿರುದ್ಯೋಗ ಪದವೀಧರರು ಉದ್ಯೋಗಕ್ಕಾಗಿ ಅರ್ಜಿ ಹಾಕಲು ಓಡಾಡಲು ವಿದ್ಯಾನಿಧಿ ಅನುಕೂಲವಾಗಿದೆ. ಶಕ್ತಿಭಾಗ್ಯದಿಂದ ಮಹಿಳೆಯರಿಗೆ ಆರ್ಥಿಕ ಹೊರೆ ಕಡಿಮೆಯಾಗಿದೆ. ಪಕ್ಷ ಇರುವುದೇ ಎಲ್ಲರಿಗಾಗಿ ಎಂಬ ಕುರಿತು ಜಾಗೃತಿ ಮೂಡಿಸಲು ಒಗ್ಗಟ್ಟಿನ ಕೂಗು ಬೇಕಿದೆ ಎಂದರು.
ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಹರಳಹಳ್ಳಿ ವಿಶ್ವನಾಥ್, ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಾದಾಪುರ ರಾಮಕೃಷ್ಣೇಗೌಡ, ಮುಖಂಡರಾದ ಎಂ.ಡಿ.ಕೃಷ್ಣಮೂರ್ತಿ, ಬಿ.ಎಲ್.ದೇವರಾಜು, ಸಾಸಲು ಈರಪ್ಪ, ಲಕ್ಷ್ಮೀಪುರ ಚಂದ್ರು, ಶಾಮಣ್ಣ, ಎಲ್.ಪಿ. ದೇವರಾಜು, ಮಂಜೇಗೌಡ, ಬಸ್ತಿ ರಂಗಪ್ಪ, ಕೃಷ್ಣೇಗೌಡ, ವೀಣಾ, ಪ್ರತಿಮಾ, ಮೀನಾಕ್ಷಿ, ಶಿವಮ್ಮ, ಆಕಾಶ್ ಮತ್ತಿತರರಿದ್ದರು.