ಯರಗಟ್ಟಿ: ಶಾಲಾ&ಕಾಲೇಜು ಆರಂಭವಾಗುತ್ತಿದ್ದು, ಮಕ್ಕಳಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ರೈತರಿಗೆ ಬಿತ್ತನೆ ಸೌಲಭ್ಯ ಪಡೆಯಲು ದಾಖಲೆಗಳ ಅವಶ್ಯಕತೆಯಿರುತ್ತದೆ. ಅವರಿಗೆಲ್ಲ ಸತಾಯಿಸದೇ ನಿಗದಿತ ಸಮಯದಲ್ಲಿಯೇ ನೀಡಿ ಎಂದು ತಾಲೂಕು ತಹಸೀಲ್ದಾರ್, ಗ್ರಾಮ ಲೆಕ್ಕಾಧಿಕಾರಿಗಳಿಗೆ ಶಾಸಕ ವಿಶ್ವಾಸ ವೈದ್ಯ ಸೂಚಿಸಿದರು.
ಯರಗಟ್ಟಿ ತಾಲೂಕಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಪ್ರಸ್ತುತ ನಿರ್ವಹಿಸುತ್ತಿರುವ ವಿವಿಧ ಐಟಿ ವ್ಯವಸ್ಥೆಗಳನ್ನು ಬಗರ್ ಹುಕುಂ ತಂತ್ರಾಂಶ, ಪೋಡಿ ಪ್ರಕರಣ (1&5 ಮತ್ತು 6&10) ತಂತ್ರಾಂಶ, ಪಹಣಿ ದಾಖಲೆಗಳೊಂದಿಗೆ ಆಧಾರ್ ಜೋಡಣೆ, ಸರ್ಕಾರಿ ಜಮೀನುಗಳ ಸಂರಕ್ಷಣೆ, ಲ್ಯಾಂಡ್ ಬಿಟ್ ಯೋಜನೆಯಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸುವ ಸಲುವಾಗಿ ಸರ್ಕಾರವು ಟ್ಯಾಪ್ಟಾಪ್ ನೀಡುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ ಎಂದರು.
ತಾಲೂಕು ತಹಸೀಲ್ದಾರ್ ಎಂ.ವಿ. ಗುಂಡಪ್ಪಗೋಳ, ಶಿರಸ್ತೇದಾರ ಎಸ್.ಬಿ.ಕುಲಕರ್ಣಿ, ಕಂದಾಯ ನಿರೀಕ್ಷಕ ವೈ.ಎಫ್. ಮುರ್ತೇನ್ನವರ, ಪಪಂ ನಾಮನಿರ್ದೇಶಿತ ಸದಸ್ಯ ನಿಖಿಲ ಪಾಟೀಲ, ಎಪಿಎಂಸಿ ಅಧ್ಯಕ್ಷ ನೀಲಕಂಡ ಸಿದ್ದಬಸವರ, ಪ್ರಕಾಶ ವಾಲಿ ಇತರರಿದ್ದರು.