ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಸಂಸದ ಶ್ರೇಯಸ್ ಪಟೇಲ್ ಸಮ್ಮುಖದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಟಿ.ಎಂ. ಶಾಹಿದ್ ಟೆಕ್ಕಿಲ್, ಪಟೇಲ್ ಶಿವಪ್ಪ, ಎಚ್.ಪಿ. ಶ್ರೀಧರ್‌ಗೌಡ, ಸೋಮಶೇಖರ್, ರಾಜೇಗೌಡ ಇತರರಿದ್ದರು.  
ಜಿಲ್ಲೆ

ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ

ಅರಕಲಗೂಡು: ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕಾರ್ಯಕರ್ತರು ಹೆಚ್ಚು ಒತ್ತು ನೀಡಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಮನವಿ ಮಾಡಿದರು.

ತಾಲೂಕಿನ ರಾಮನಾಥಪುರದ ಕಾವ್ಯಾಂಜಲಿ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷ ಸಂಘಟನೆಗೆ ಶ್ರಮಿಸುತ್ತಿರುವ ಮುಖಂಡ ಶ್ರೀಧರ್‌ಗೌಡ ಅವರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ಸಂತಸದ ಸಂಗತಿ. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿಯೂ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀಧರ್‌ಗೌಡ ಅವರು ಸೋಲು ಕಂಡರೂ ದೃತಿಗೆಟ್ಟು ಮನೆಯಲ್ಲಿ ಕೂರದೆ ಪಕ್ಷದ ಸಂಘಟನೆಗೆ ಹಾಗೂ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಾಯಕತ್ವದ ಗುಣ ಬೆಳೆಸಿಕೊಂಡಿರುವ ಇಂತಹ ಮುಖಂಡರ ಸೇವೆ ಪಕ್ಷದ ಸಂಘಟನೆಗೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್‌ಗೌಡ ಮಾತನಾಡಿ, ರಾಮನಾಥಪುರ ಗ್ರಾಪಂ ಉಪಾಧ್ಯಕ್ಷ ಮಾದೇಶ್ ಅವರೊಂದಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಭಾಗದಲ್ಲಿ ಹಲವಾರು ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವುದು ಪಕ್ಷದ ಸಂಘಟನೆಗೆ ಆನೆ ಬಲ ಬಂದಂತಾಗಿದೆ. ಇದರಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.

ಅರಕಲಗೂಡು ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಹಾಗೂ ರಾಜ್ಯ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ಟೆಕ್ಕಿಲ್ ಮಾತನಾಡಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಟಿ. ಸೋಮಶೇಖರ್, ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಗೌಡ, ಪಪಂ ಉಪಾಧ್ಯಕ್ಷ ಸುಬಾನ್ ಷರೀಪ್, ಮಾಜಿ ಉಪಾಧ್ಯಕ್ಷ ಸಲೀಂ ಪಾಷ, ಮುಖಂಡರಾದ ಹೊನ್ನಿಕೊಪ್ಪಲು ಮಂಜೇಗೌಡ, ಸರಗೂರು ದೊಡ್ಡೇಗೌಡ, ದಾಸರಕೊಪ್ಪಲು ರಘು, ಲಕ್ಷ್ಮಣ್, ಎಸ್.ಎಲ್. ಗಣಪತಿ ಇತರರಿದ್ದರು. ರಾಮನಾಥಪುರ ಗ್ರಾಪಂ ಉಪಾಧ್ಯಕ್ಷ ಬಿಳಗೂಲಿ ಮಾದೇಶ್, ಯಲಗತವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರವಿ, ಯೋಗೇಶ್, ವಡ್ಡರಹಳ್ಳಿ ಸುರೇಶ್ ಸೇರಿದಂತೆ ಅಪಾರ ಕಾರ್ಯಕರ್ತರು ಮತ್ತು ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಸಂಸದ ಶ್ರೇಯಸ್ ಪಟೇಲ್, ಪಕ್ಷದ ಉಸ್ತುವಾರಿ ಶಾಹಿದ್ ಟೆಕ್ಕಿ ಅವರು ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದರು.