ತರೀಕೆರೆ: ಪಂಚ ಗ್ಯಾರಂಟಿ ಯೋಜನೆ ಸೌಲಭ್ಯ ತಾಲೂಕಿನ ಅರ್ಹ ಲಾನುಭವಿಗಳಿಗೆ ಸಕಾಲದಲ್ಲಿ ಸಿಗುವಂತೆ ಆಯಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಗೋವಿಂದೇಗೌಡ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರತಿ ತಿಂಗಳು ಗ್ಯಾರಂಟಿ ಯೋಜನೆ ಕುರಿತು ಸಂಬಂಧಿಸಿದ ಇಲಾಖೆ ಕಚೇರಿಯಲ್ಲಿ ಆಯೋಜಿಸುವ ಮಾಸಿಕ ಸಭೆಗೆ ಅನುಷ್ಠಾನ ಸಮಿತಿ ಸದಸ್ಯರನ್ನು ಆಹ್ವಾನಿಸಿ ಸೂಕ್ತ ಮಾಹಿತಿ ನೀಡಬೇಕು. ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಒಂದೊಂದು ಗ್ರಾಮದಲ್ಲಿ ಶಿಬಿರ ಆಯೋಜಿಸಿ ಪಂಚಗ್ಯಾರಂಟಿಯಿಂದ ಆಗುತ್ತಿರುವ ಪ್ರಯೋಜನಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಇಒ ಡಾ.ಆರ್.ದೇವೇಂದ್ರಪ್ಪ ಮಾತನಾಡಿ, ಗ್ಯಾರಂಟಿ ಯೋಜನೆ ವ್ಯಾಪ್ತಿಗೊಳಪಡುವ ಐದು ಇಲಾಖೆ ಅಧಿಕಾರಿಗಳು ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಸಭೆಯಲ್ಲಿ ಭಾಗವಹಿಸಿರುವ ಸದಸ್ಯರಿಗೆ ಸಮಗ್ರ ಮಾಹಿತಿ ನೀಡಬೇಕು ಎಂದರು.
ಯುವನಿಧಿ ಯೋಜನಾಧಿಕಾರಿ ಬೀಬಿಜಾನ್ ನದಾಪ್ ಮಾತನಾಡಿ, ಸದ್ಯದಲ್ಲೇ ಎಲ್ಲ ಕಾಲೇಜುಗಳಲ್ಲಿ ಸಭೆ ಏರ್ಪಡಿಸಿ ಸಮಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಸಭೆಯಲ್ಲಿ ಯೋಜನೆ ಲಾಭ ಪಡೆದುಕೊಳ್ಳುವಂತೆ ತಿಳಿಸಲಾಗುವುದು ಎಂದು ಹೇಳಿದರು.
ಆಹಾರ ಇಲಾಖೆ ಶಿರಸ್ತೇದಾರ್ ಜಗದೀಶ್ ಮಾತನಾಡಿ, ಈ ಬಾರಿ ಪಡಿತರ ವಿತರಣೆ ಮಾಡುವಾಗ ೆಬ್ರವರಿ ತಿಂಗಳ 5 ಕೆಜಿ ಅಕ್ಕಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಸಿಡಿಪಿಒ ಎನ್.ಚರಣ್‌ರಾಜ್, ಮೆಸ್ಕಾಂ ಎಇಇ ಮಂಜುನಾಥ್ ಮತ್ತಿತರರಿದ್ದರು.