ಜಿಲ್ಲೆ

ಕರಪತ್ರದ ಮೂಲಕ ಮಾಹಿತಿ ತಲುಪಿಸಿ

Mysuru - Desk - Ravikumar

 ಹನೂರು: ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಕಟ್ಟಡ ಕಾರ್ಮಿಕರಿಗೆ ಅರಿವಿಲ್ಲ. ಆದ್ದರಿಂದ ಸಿಗುವ ಸವಲತ್ತುಗಳ ಬಗ್ಗೆ ಕರಪತ್ರದ ಮೂಲಕ ಮಾಹಿತಿ ಒದಗಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ತಾಲೂಕಿನ ಒಡೆಯರಪಾಳ್ಯದ ಶ್ರೀ ಗುರುಮಲ್ಲೇಶ್ವರ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾರತಮಾತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕ್ರಿಯಾಶೀಲ ಮಂತ್ರಿಯಾಗಿದ್ದು, ಇಲಾಖೆಯನ್ನು ಮುಂಚೂಣಿಯತ್ತ ಕೊಂಡೊಯ್ಯುವಲ್ಲಿ ಶ್ರಮಿಸುತ್ತಿದ್ದಾರೆ. ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ಅನುಕೂಲ ಕಲ್ಪಿಸಿದ್ದಾರೆ. ತಾಲೂಕಿನಲ್ಲಿ ಸುಮಾರು ನಾಲ್ಕೂವರೆ ಸಾವಿರ ಕಟ್ಟಡ ಕಾರ್ಮಿಕರಿದ್ದಾರೆ. ಆದರೆ, ಸಮರ್ಪಕ ಮಾಹಿತಿ ಇಲ್ಲದ ಪರಿಣಾಮ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶ್ರಮಿಕರಿಗೆ ಮಾಹಿತಿ ಒದಗಿಸಬೇಕು. ಇದರಿಂದ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್. ದತ್ತೇಶ್‌ಕುಮಾರ್ ಮಾತನಾಡಿ, ಹಿಂದೆ ಕಟ್ಟಡ ಕಾರ್ಮಿಕರ ಸಂಘವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಂಘಟನೆಯಾಗಿತ್ತು. ಸರ್ಕಾರದಿಂದ ಸವಲತ್ತುಗಳು ಸಿಗುತ್ತಿರಲಿಲ್ಲ. ಆದರೆ, ಇದೀಗ ಸರ್ಕಾರ ಹಲವು ಸವಲತ್ತುಗಳನ್ನು ನೀಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಹೊಂದಬೇಕು. ಈ ಮೂಲಕ ಸವಲತ್ತು ಪಡೆದುಕೊಳ್ಳಲು ಸಾಧ್ಯ ಎಂದರು.

ಸಂಘದ ಅಧ್ಯಕ್ಷ ಸಿದ್ದರಾಜು, ತಿ.ನರಸೀಪುರ ತಾಲೂಕು ಅಧ್ಯಕ್ಷ ರಾಜೇಶ್, ಒಡೆಯರಪಾಳ್ಯ ಅಧ್ಯಕ್ಷ ನಾಗೇಂದ್ರಸ್ವಾಮಿ, ಉಪಾಧ್ಯಕ್ಷ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ತಾಲೂಕು ಕಾರ್ಮಿಕ ಅಧಿಕಾರಿ ಪ್ರಸಾದ್ ಹಾಗೂ ಇನ್ನಿತರರು ಇದ್ದರು.