ಜಿಲ್ಲೆ

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ

ಕೆ.ಆರ್.ಪೇಟೆ: ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಸೇರಿ ಮೂಲ ಸೌಕರ್ಯ ಒದಗಿಸಲು ಗ್ರಾಮ ಪಂಚಾಯಿತಿಗಳು ಶ್ರಮಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಸೂಚಿಸಿದರು.

ತಾಲೂಕಿನ ಬೂಕನಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಬೂಕನಕೆರೆ ಗ್ರಾಮ ಪಂಚಾಯಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಆ ಯೋಜನೆಗಳ ಬಗ್ಗೆ ಜನರಿಗೆ ಅರಿವಿಲ್ಲ. ಗ್ರಾಮ ಪಂಚಾಯಿತಿಗಳು ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು.

ಆಯುಷ್ಮಾನ್ ಭಾರತ್ ಕಾರ್ಡ್ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಒಂದು ಯೋಜನೆ. ಈ ಕಾರ್ಡ್‌ನ್ನು ಉಚಿತವಾಗಿ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲೂ 5 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ ದೊರೆಯಲಿದೆ. ಪ್ರಧಾನ ಮಂತ್ರಿ ಜೀವನ್ ಬಿಮಾ ಯೋಜನೆಯ ಮೂಲಕ 18 ರಿಂದ 50 ವರ್ಷ ವಯೋಮಾನದವರಿಗೆ ವಿಮಾ ಸೌಲಭ್ಯ ಪಡೆಯಬಹುದು. ವಾರ್ಷಿಕ ಪ್ರೀಮಿಯಂ 436 ರೂ. ಪಾವತಿಸಿದರೆ ಈ ಯೋಜನೆಯ ಮೂಲಕ ಆಕಸ್ಮಿಕ ಮರಣಕ್ಕೀಡಾದ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂ. ಸಿಗುತ್ತದೆ. ಪ್ರಧಾನ ಮಂತ್ರಿ ಸಂಧ್ಯಾ ಭೀಮಾ ಯೋಜನೆ, ಅನುಗ್ರಹ ಯೋಜನೆ, ಎನ್.ಎಲ್.ಎಂ ಯೋಜನೆಯಡಿ, ಅನ್ನ ಸುವಿಧಿ ಯೋಜನೆ, ಗೃಹ ಆರೋಗ್ಯ ಯೋಜನೆ ಹೀಗೆ ಹಲವು ಯೋಜನೆಗಳು ಜಾರಿಗೆ ಬಂದಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗಳು ಮನೆ ಮನೆಗೆ ತೆರಳು ಜನರಿಗೆ ಅರಿವು ಮೂಡಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಂಪ್ರಸಾದ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷೆ ಕುಸುಮ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ತಾ.ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ತಾ.ಪಂ ಮಾಜಿ ಸದಸ್ಯ ಹುಲ್ಲೇಗೌಡ, ಬೂಕನಕೆರೆ ಸೊಸೈಟಿ ಅಧ್ಯಕ್ಷ ಬಿ.ಪ್ರಕಾಶ್, ಬಲ್ಲೇನಹಳ್ಳಿ ನಂದೀಶ್, ಪಿಡಿಒ ಡಾ.ಟಿ.ನರಸಿಂಹರಾಜು,ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಧ್ರುವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಮುಖಂಡರು ಇದ್ದರು.