ಶೃಂಗೇರಿ ಪಪಂ ಕಚೇರಿಯಲ್ಲಿ 2023-24ರ ಅಯವ್ಯಯ ಪೂರ್ವಭಾವಿ ಸಭೆ ನಡೆಯಿತು.  
ಜಿಲ್ಲೆ

ಇ-ಸ್ವತ್ತುಗಳನ್ನು ಶೀಘ್ರದಲ್ಲಿ ವಿತರಿಸಿ

ಜಿ.ಹೆಚ್. ಧನ್ಯಕುಮಾರ್

ಶೃಂಗೇರಿ: ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಬಾಕಿ ಇರುವ ಇ-ಸ್ವತ್ತುಗಳನ್ನು ಶೀಘ್ರ ವಿತರಿಸಬೇಕು ಎಂದು ಪಪಂ ಆಡಳಿತಾಧಿಕಾರಿ ತಹಸೀಲ್ದಾರ್ ಪಿ.ಗೌರಮ್ಮ ಅಧಿಕಾರಿಗಳಿಗೆ ಸೂಚಿಸಿದರು.
ಪಪಂ ಕಚೇರಿಯಲ್ಲಿ ಬುಧವಾರ 2023-24ರ ಅಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಪಂ ವ್ಯಾಪ್ತಿಯಲ್ಲಿ ಬಿಡಾಡಿ ದನಗಳು ಹಾಗೂ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ. ಮೆಸ್ಕಾಂ ಕಚೇರಿ ಎದುರು ಬಸ್‌ನಿಲ್ದಾಣದ ಅಗತ್ಯವಿದ್ದು, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಬಿ.ಅರುಣ್ ಒತ್ತಾಯಿಸಿದರು.
ಅನುಪಾಲನ ವರದಿಯಲ್ಲಿ ಟೆಂಡರ್ ಕರೆಯಲಾಗಿದೆ-ಡ್ರೈನೇಜ್ ದುರಸ್ತಿಯಲ್ಲಿದೆ ಎಂದು ಇದೆ. ಆದರೆ ಯಾವುದೇ ಕೆಲಸವಾಗುತ್ತಿಲ್ಲ. ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಕ್ರಮಕೈಗೊಳ್ಳಬೇಕು. ಯಾವುದೇ ಪ್ರಕ್ರಿಯೆಗಳು ನಡೆಯುವಾಗ ಅಧಿಕಾರಿಗಳು ಸದಸ್ಯರ ಗಮನಕ್ಕೆ ತಂದು ಕಾರ್ಯನಿರ್ವಹಿಸಬೇಕು ಎಂದು ಸದಸ್ಯೆ ಆಶಾ ದಿನೇಶ್ ಶೆಟ್ಟಿ ತಿಳಿಸಿದರು.
ಹರೀಶ್.ವಿ.ಶೆಟ್ಟಿ ಮಾತನಾಡಿ, ಕುಡಿಯುವ ನೀರಿನ ಕುರಿತು ಪಪಂ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಪಟ್ಟಣ ನಿವಾಸಿಗಳಿಗೆ ಶುದ್ಧ ನೀರಿನ ಸೌಲಭ್ಯ ಕಲ್ಪಿಸಬೇಕು. ಕುವೆಂಪು ಬಸ್‌ನಿಲ್ದಾಣದ ಮೇಲಿರುವ ಕೊಠಡಿಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕು. ಹರಿಹರ ಬೀದಿಯಲ್ಲಿ ಪರವಾನಗಿ ಪಡೆಯದೆ ವಸತಿಗೃಹ ನಡೆಸಲಾಗುತ್ತಿದೆ. ಅವರಿಗೆ ನೋಟಿಸ್ ನೀಡುವ ಬದಲು ಬೀಗ ಹಾಕಬೇಕು ಎಂದರು.
ಮಾಜಿ ನಾಮ ನಿರ್ದೇಶನ ಸದಸ್ಯ ಎಚ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ನದಿ ಪಕ್ಕದ ಚಿಕನ್ ಅಂಗಡಿಗಳ ನೀರಿನ ತ್ಯಾಜ್ಯ ಎಲ್ಲಿ ಹೋಗುತ್ತದೆ ಎಂಬುದರ ಕುರಿತು ಇತ್ತೀಚೆಗೆ ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ಚರ್ಚೆಯಾಗಿದೆ. ಈ ಕುರಿತು ಪಪಂ ಸೂಕ್ತ ಕ್ರಮಕೈಗೊಂಡು ತುಂಗಾನದಿ ಪಾವಿತ್ರತ್ಯೆ ಉಳಿಸಿಕೊಳ್ಳಬೇಕು.ಕುರುಬಕೇರಿ ಹಾಗೂ ಕಟ್ಟೆಬಾಗಿಲು ಸಮೀಪ ಹೈಟೆಕ್ ಶೌಚಗೃಹ ಅಗತ್ಯವಿದ್ದು, ಅದನ್ನು ನಿರ್ಮಾಣ ಮಾಡುವಕಡೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.