ಜಿಲ್ಲೆ

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ನಿಯೋಗ ಭೇಟಿ: ಮೇಘಾಲಯ ಸಹಕಾರ ಇಲಾಖೆಯ ಅಧಿಕಾರಿಗಳಿಂದ ಸಮಗ್ರ ಅಧ್ಯಯನ

ಬೆಳ್ತಂಗಡಿ: ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಕಾರ್ಯ ಚಟುವಟಿಕೆಗಳ ಅಧ್ಯಯನಕ್ಕಾಗಿ 25 ಸದಸ್ಯರ ಮೇಘಾಲಯ ರಾಜ್ಯದ ಸಹಕಾರಿ ಇಲಾಖೆಯ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿತು.

ಮೇಘಾಲಯ ಸಹಕಾರಿ ಇಲಾಖೆಯ ಅಧಿಕಾರಿಗಳು ತಂಡದಲ್ಲಿದ್ದು ಕಿಲ್ಲೂರು, ಕಡಿರುದ್ಯಾವರ ಹಾಗೂ ನಾವೂರು ಶಾಖೆಗೆ ಭೇಟಿ ನೀಡಿ ಸಂಘದ ಮುಖಾಂತರ ವಿತರಣೆಯಾಗುತ್ತಿರುವ ಸಾಲ ಯೋಜನೆಗಳು ಮತ್ತು ಮಾರಾಟ ವ್ಯವಹಾರಗಳ ಸಮಗ್ರ ಮಾಹಿತಿ ಪಡೆದರು. ಕೇಂದ್ರ ಸರ್ಕಾರ ಹಾಗೂ ನಬಾರ್ಡ್ ಯೋಜನೆಯಡಿಯಲ್ಲಿ ನಿರ್ಮಾಣವಾದ ಕಡಿರುದ್ಯಾವರ ಶಾಖೆಯ ವ್ಯವಹಾರದ ಮಾಹಿತಿ ಪಡೆದರು.

ಸಂಘವು ಪೂರ್ಣ ಪ್ರಮಾಣದ ಏಳು ಶಾಖೆ ಹೊಂದಿದ್ದು, ಪತ್ತು ಮತ್ತು ಪತ್ತೇತರ ವ್ಯವಹಾರಗಳನ್ನು ನಡೆಸುತ್ತಿದೆ. ವ್ಯವಹಾರಗಳ ಯಶಸ್ವಿ ಅನುಷ್ಠಾನದಿಂದ ನಬಾರ್ಡಿನ ಗಮನ ಸೆಳೆದಿದ್ದು, ಅಪೆಕ್ಸ್ ಬ್ಯಾಂಕಿನ ರಾಜ್ಯದ ಅತ್ಯುತ್ತಮ ಸಹಕಾರ ಸಂಘ ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಜಿಲ್ಲಾಮಟ್ಟದ ಉತ್ತಮ ಸಹಕಾರ ಸಂಘವೆಂಬ ಪ್ರಶಸ್ತಿ ಪಡೆದುಕೊಂಡಿದೆ ಎಂಬ ಮಾಹಿತಿ ನೀಡಲಾಯಿತು.

ನಬಾರ್ಡ್ ಸಂಸ್ಥೆಯ ಡಿಡಿ ಎಂ.ಸತೀಶನ್ ಕರ್ತಾ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಗೌಡ, ಶಾಖಾ ವ್ಯವಸ್ಥಾಪಕರಾದ ಪ್ರಕಾಶ್ ಕುಮಾರ್, ರಮಾನಂದ ಕೆ, ಚಂದ್ರಹಾಸ ಮತ್ತು ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.