ಜಿಲ್ಲೆ

ರಾಷ್ಟ್ರೀಯ ರಕ್ಷಣಾ ಕಾಲೇಜಿನ ನಿಯೋಗ ಭೇಟಿ

ಮಡಿಕೇರಿ: ನವ ದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನ ನಿಯೋಗವು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್‌ರವರನ್ನು ಬುಧವಾರ ಭೇಟಿ ಮಾಡಿ, ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂವಾದ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ಮಾಹಿತಿ ನೀಡಿ, ಕೊಡಗು ಜಿಲ್ಲೆಯು ೫ ತಾಲೂಕು, ೧೬ ಹೋಬಳಿ, ೧೦೩ ಗ್ರಾಮ ಪಂಚಾಯಿತಿ, ೫೩೧ ಕಂದಾಯ ಗ್ರಾಮಗಳನ್ನು ಒಳಗೊಂಡಿದ್ದು, ೬.೧೩ ಲಕ್ಷ ಜನಸಂಖ್ಯೆ ಹೊಂದಿದೆ ಎಂದು ತಿಳಿಸಿದರು.


೧೬ ಹೋಬಳಿ ಕೇಂದ್ರಗಳಲ್ಲಿ ಅಟಲ್ ಜೀ ಜನಸ್ನೇಹಿ ಹಾಗೂ ಸ್ಪಂದನಾ ಕೇಂದ್ರಗಳ ಮೂಲಕ ಆಧಾರ್, ಭೂಮಿ, ಮತ್ತಿತರ ಸೇವೆಗಳನ್ನು ಕಲ್ಪಿಸಲಾಗುತ್ತಿದೆ. ಬೆಳೆಹಾನಿ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ೪೬,೦೯೯ ಫಲಾನುಭವಿಗಳಿಗೆ ೧೩೩.೨೬ ಕೋಟಿ ರೂ. ವಿತರಿಸಲಾಗಿದೆ ಎಂದರು.


ಗ್ರಾಮ ಒನ್ ಸೇವೆಗಳು ಗ್ರಾ.ಪಂ. ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಸಕಾಲ ಯೋಜನೆಯಡಿ ಹಲವು ಸೇವೆಗಳನ್ನು ಕಾಲ ಮಿತಿಯಲ್ಲಿ ಒದಗಿಸಲಾಗುತ್ತಿದೆ. ಮುಂಗಾರು ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ಎದುರಿಸುವುದು, ಜಿಲ್ಲೆಯಲ್ಲಿನ ಪ್ರವಾಸಿ ಸ್ಥಳಗಳು, ಮತ್ತಿತರ ಬಗ್ಗೆ ಜಿಲ್ಲಾಧಿಕಾರಿ ವಿವರವಾಗಿ ಮಾಹಿತಿ ನೀಡಿದರು.


ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ಸ್ವಚ್ಚ ಭಾರತ ಅಭಿಯಾನದಡಿ ಸಮರ್ಪಕವಾಗಿ ಘನ ತ್ಯಾಜ್ಯ ವಿಲೇವಾರಿ ಮಾಡುವುದು. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸುವುದು. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಡಿಜಿಟಲ್ ಗ್ರಂಥಾಲಯ ಯೋಜನೆಯಡಿ ಓದುವ ಬೆಳಕು ಕಾರ್ಯಕ್ರಮ ಅನುಷ್ಠಾನ, ಇ-ಸ್ವತ್ತು ಮತ್ತಿತರ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ರಕ್ಷಣೆಗೆ ಒತ್ತು ನೀಡುವುದು, ರಸ್ತೆ ಸುರಕ್ಷತೆ, ಸುಗಮ ಸಾರಿಗೆ ಸಂಚಾರ ಮತ್ತಿತರ ಕಾರ್ಯ ಕೈಗೊಳ್ಳಲಾಗುತ್ತದೆ ಎಂದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎನ್.ಮಂಜುನಾಥ್ ಮಾತನಾಡಿ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ ಸಹಾಯಧನದಡಿ ಇದುವರೆಗೆ ೧೪,೬೦೭ ಫಲಾನುಭವಿಗಳಿಗೆ ೬೩೭.೪೨ ಲಕ್ಷ ರೂ. ಭರಿಸಲಾಗಿದೆ. ಪೋಷಣಾ ಅಭಿಯಾನ ಯೋಜನೆಯಡಿ ಪೌಷ್ಟಿಕ ಆಹಾರ ವಿತರಣೆ, ಪೋಷಣೆ ಮಾಸಾಚರಣೆ ಚಟುವಟಿಕೆಯಡಿ ಅರಿವು ಮೂಡಿಸಲಾಗುತ್ತದೆ ಎಂದರು.


ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಾಲಸುಬ್ರಮಣ್ಯಂ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ, ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಸಬ್ ರಿಜಿಸ್ಟ್ರಾರ್ ಸೌಮ್ಯಲತಾ ಇಲಾಖೆಯ ಮಾಹಿತಿ ನೀಡಿದರು.


ಸರ್ಕಾರದ ವಿವಿಧ ಇಲಾಖೆಗಳ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಏರ್‌ವೈಸ್ ಮಾ?ರ್ಲ್ ತೇಜ್‌ಬೀರ್ ಸಿಂಗ್, ರಾಷ್ಟ್ರೀಯ ರಕ್ಷಣೆ ಮತ್ತು ಶೈಕ್ಷಣಿಕ ಅಧ್ಯಯನ ಸಂಬಂಧಿಸಿದಂತೆ ರಕ್ಷಣೆ, ಸಿವಿಲ್ ಸೇವೆಗಳ ಮಾಹಿತಿ ಪಡೆಯುವುದು. ಹಲವು ರಾಜ್ಯಗಳ ಪ್ರವಾಸ ಕೈಗೊಂಡು ಆರ್ಥಿಕ ಹಾಗೂ ಗ್ರಾಮೀಣ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಮತ್ತಿತರ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ಪಡೆಯುವುದು ನಿಯೋಗದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಸಂವಾದದಲ್ಲಿ ಗ್ರಾಮೀಣ ಅಭಿವೃದ್ಧಿ, ಸ್ವಚ್ಚತೆ, ಶೈಕ್ಷಣಿಕ ಚಟುವಟಿಕೆ, ಘನ ತ್ಯಾಜ್ಯ ಸಮರ್ಪಕ ವಿಲೇವಾರಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ, ಪ್ರವಾಸೋದ್ಯಮ ಅಭಿವೃದ್ಧಿ ಹೀಗೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದರು.


ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ, ಭೂದಾಖಲೆಗಳ ಉಪ ನಿರ್ದೇಶಕ ಪಿ.ಶ್ರೀನಿವಾಸ್, ಕೆಪಿಟಿಸಿಎಲ್ ಇಇ ಮಾದೇಶ್, ಸೆಸ್ಕ್ ಇಇ ಅನಿತಾ ಬಾಯಿ ಇತರರು ಇತರರಿದ್ದರು.

ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ
೧೮ ಜನರನ್ನು ಒಳಗೊಂಡ ರಾಷ್ಟ್ರೀಯ ರಕ್ಷಣಾ ಕಾಲೇಜಿನ ನಿಯೋಗವು ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನ, ಕೋಟೆ, ರಾಜಸೀಟು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.


ಜನರಲ್ ತಿಮ್ಮಯ್ಯ ಅವರ ಸೇನಾ ಸಾಧನೆಯ ಬಗ್ಗೆ ಸಮಗ್ರ ಚಿತ್ರಣ ನೀಡುವ ಸ್ಮಾರಕ ಭವನವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗಿದ್ದು, ಪ್ರತಿಯೊಬ್ಬ ಭಾರತೀಯನೂ ವೀರ ಸೇನಾನಿಯ ಸಾಧನೆಯ ಬಗ್ಗೆ ತಿಳಿದುಕೊಳ್ಳಲು ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡುವಂತಾಗಬೇಕು ಏರ್ ವೈಸ್ ಮಾ?ರ್ಲ್ ತೇಜ್ ಬೀರ್ ಸಿಂಗ್ ಹೇಳಿದರು.


ಭವಿ?್ಯದ ಸೇನಾ ನಾಯಕರಿಗೆ ತಿಮ್ಮಯ್ಯ ಸ್ಮಾರಕ ಭವನ ಮಾರ್ಗದರ್ಶನ ನೀಡುವಂತಿದೆ. ಜನರಲ್ ತಿಮ್ಮಯ್ಯ ಭಾರತೀಯ ಸೇನೆಯನ್ನು ಮುನ್ನಡೆಸಿದ ರೀತಿಯೂ, ಈಗಿನ ಸೈನಿಕರಿಗೆ ಪ್ರೇರಣೆ ನೀಡುವಂತಿದೆ ಎಂದು ಅಭಿಪ್ರಾಯಪಟ್ಟರು.
ತಿಮ್ಮಯ್ಯ ಸೇನಾ ಜೀವನದ ಬಗ್ಗೆ ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ನಿಯೋಗಕ್ಕೆ ಮಾಹಿತಿ ನೀಡಿದರು. ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮೇಜರ್ ಬಾಲಸುಬ್ರಹ್ಮಣ್ಯಂ ಹಾಜರಿದ್ದರು.