ಬೆಂಗಳೂರು: ಕನ್ನಡ ಹಾಗೂ ಕನ್ನಡಿಗರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ದೆಹಲಿಗೆ ನಿಯೋಗ ತೆರಳುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು, ಡಿ. 17ರಿಂದ 19ರ ಅವಧಿಯಲ್ಲಿ ದೆಹಲಿಗೆ ತೆರಳಲಿರುವ ನಿಯೋಗವು ಕರ್ನಾಟಕದ ಸಂಸದರನ್ನು ಭೇಟಿ ಮಾಡಿ, ಕನ್ನಡ ನಾಡು ಭಾಷೆ ಮತ್ತು ಸಂಸ್ಕೃತಿ ವಿಚಾರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ಗ್ರಾಮೀಣ ಬ್ಯಾಂಕುಗಳ ವಿಲೀನದ ನೆಪದಲ್ಲಿ ಕನ್ನಡ ಅಸ್ಮಿತೆಯ ಕಡೆಗಣನೆ, ಸ್ಥಳೀಯರಿಗೆ ಉದ್ಯೋಗಾವಕಾಶಗಳ ವಂಚನೆ, ಬ್ಯಾಂಕ್ ಆಡಳಿತದಲ್ಲಿ ಕನ್ನಡ ಭಾಷೆಯ ಸೇವೆ, ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ, ಜೆಎನ್‌ಯು ಕನ್ನಡ ಪೀಠದ ಬಲವರ್ಧನೆ, ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರದ ಕಾರ್ಯ ನಿರ್ವಹಣೆ, ಕೇಂದ್ರ ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೂ ಆದ್ಯತೆ, ನ್ಯಾಯಾಲಯಗಳಲ್ಲಿ ಪ್ರಾದೇಶಿಕ ಭಾಷೆಗಳ ತೀರ್ಪುಗಳ ಪ್ರಾಮುಖ್ಯತೆ ಸೇರಿ ಹಲವು ವಿಷಯಗಳನ್ನು ನಿಯೋಗವು ಕೇಂದ್ರ ಸಚಿವರ ಗಮನಕ್ಕೆ ತಂದು ಪರಿಹಾರಕ್ಕೆ ಆಗ್ರಹಿಸಲಿದೆ ಎಂದು ಅವರು ವಿವರಿಸಿದ್ದಾರೆ.
ಪ್ರಾಧಿಕಾರದ ನಿಯೋಗದಲ್ಲಿ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಸಂಸದ ಡಾ.ಎಲ್. ಹನುಮಂತಯ್ಯ, ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ, ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ವಿ.ಪಿ. ನಿರಂಜನಾರಾಧ್ಯ, ಡಾ.ಎ.ಬಿ. ರಾಮಚಂದ್ರಪ್ಪ ಮತ್ತು ದಾಕ್ಷಾಯಿಣಿ ಹುಡೇದ ಅವರು ಇರಲಿದ್ದಾರೆ ಎಂದು ಡಾ.ಬಿಳಿಮಲೆ ತಿಳಿಸಿದ್ದಾರೆ.