ಜಿಲ್ಲೆ

ನೂತನ ಸೇತುವೆ ನಿರ್ಮಾಣ ಕಾರ್ಯ ವಿಳಂಬ, ತಾತ್ಕಾಲಿಕ ಸೇತುವೆ ಕುಸಿತ: ಸಾರ್ವಜನಿಕರ ಪರದಾಟ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯ ಸೇತುವೆ ಕುಸಿಯುತ್ತಿದ್ದು, ಜನರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಎನ್.ಎಚ್. 69 ರ ಗಿಡಗಾನಹಳ್ಳಿ-ಪುರ ನಡುವಿನ ಹಳೆಯ ಸೇತುವೆಯನ್ನು ತೆರವುಗೊಳಿಸಿ, ನೂತನ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ವಾಹನ ಸಂಚಾರಕ್ಕೆಂದು ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಕುಸಿತಕ್ಕೊಳಗಾಗಿದೆ. ತಾತ್ಕಾಲಿಕ ದುರಸ್ತಿ ಕೆಲಸಗಳನ್ನು ಮಾಡಿದರೂ ನಿತ್ಯ ಬೀಳುತ್ತಿರುವ ಮಳೆಗೆ ಪದೇ ಪದೆ ಸೇತುವೆ ಕುಸಿಯುತ್ತಿದೆ.  ಇದರಿಂದ ತಾಲೂಕು ಕೇಂದ್ರ ಗೌರಿಬಿದನೂರು ಮತ್ತು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಡುವೆ ನಿತ್ಯ ಸಂಚರಿಸುವ ವಾಹನಗಳ ಸವಾರರು ಪರದಾಡುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಭಕ್ತರಹಳ್ಳಿ-ಗಿಡಗಾನಹಳ್ಳಿ ಮಾರ್ಗವನ್ನು ಬಳಸಿಕೊಂಡು ಸಂಚರಿಸುತ್ತಿದ್ದು, ಬೃಹತ್ ವಾಹನಗಳು ತೊಂಡೇಬಾವಿ-ಮಂಚೇನಹಳ್ಳಿ ಮಾರ್ಗ ಹಾಗೂ ಗೌರಿಬಿದನೂರು - ನಾಮಗೊಂಡ್ಲು-  ಮಂಚೇನಹಳ್ಳಿ ಮಾರ್ಗದ ಮೂಲಕ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಕಡೆಗೆ ಸಂಚರಿಸುವಂತಾಗಿದೆ. ಈಗಾಗಲೆ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದೆ. ಆದಾಗ್ಯೂ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಬೇಸಿಗೆಯಲ್ಲಿ ಕಾಮಗಾರಿ ನಡೆಸುವ ಬದಲಾಗಿ ಮಳೆಗಾಲದಲ್ಲಿ ಸೇತುವೆ ಕಾಮಗಾರಿ ನಡೆಸಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.