ಮುದಗಲ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಫಲಿತಾಂಶ ತೀವ್ರ ಕುಸಿದಿದೆ. ಆದರೆ, ಸುಧಾರಣೆ ಕುರಿತು ಮಾತನಾಡುತ್ತಿರುವ ರಾಜ್ಯ ಸರ್ಕಾರ ಒಳಮೀಸಲಾತಿ ನೆಪದಲ್ಲಿ ಈ ಭಾಗದಲ್ಲಿ 20 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬ ಮಾಡುತ್ತಿದೆ ಎಂದು ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ನೇಮಕಾತಿ ಕುರಿತು ಅಧಿವೇಶನದಲ್ಲಿ ಎಷ್ಟು ಬಾರಿ ಒತ್ತಾಯಿಸಿದರೂ ಸರ್ಕಾರ ಕೇಳುತ್ತಿಲ್ಲ. ಒಳಮೀಸಲಾತಿಗೆ ವಿರೋಧವಿಲ್ಲ. ಆದರೆ, ಅದೇ ನೆಪದಲ್ಲಿ ಶಿಕ್ಷಕರ ನೇಮಕಾತಿ ಮುಂದೂಡುತ್ತ ಬರುವುದು ಸರಿಯಲ್ಲ ಎಂದರು.
ಪರೀಕ್ಷೆಗಳಿಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿ ಮಾಡಿರುವುದು ಮಹತ್ವದ ಹೆಜ್ಜೆಯಾಗಿದೆ. ಫಲಿತಾಂಶ ಕುಸಿತ ಕಾರಣ ನೀಡಿ ವಿಷಯವಾರು ಶಿಕ್ಷಕರಿಗೆ ದಂಡ, ವೇತನ ಬಡ್ತಿ ತಡೆಯುವುದು ಸರಿಯಾದ ಕ್ರಮವಲ್ಲ ಎಂದ ಅವರು, ಎಸ್ಸೆಸ್ಸೆಲ್ಸಿ-ಪಿಯು ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು. ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ನಡೆಸಬೇಕು ಎಂದು ಒತ್ತಾಯಿಸಿದರು. ಡಾ.ಜಿ.ಆರ್. ದೇಶಪಾಂಡೆ, ಉದಯಕುಮಾರ ಕಮ್ಮಾರ ಇದ್ದರು.