ಜಿಲ್ಲೆ

ಯೋಧನ ಕುಟುಂಬಕ್ಕೆ ಭೂ ದಾಖಲೆ ಕಲ್ಪಿಸಲು ವಿಳಂಬ

ಕೋಲಾರ: ಜಿಲ್ಲೆಯ ಕೆಜಿಎ್​ ತಾಲೂಕಿನ ಪಾರಂಡಹಳ್ಳಿಯ ಮಾಜಿ ಯೋಧ ಕೆಂಚಪ್ಪ ಸೋಮಣ್ಣ ಅವರ ಪತ್ನಿ ಶಾಂತಮ್ಮ ಅವರ ಮೃತದೇಹವನ್ನು ಜಿಲ್ಲಾಡಳಿತ ಭವನದ ಎದುರು ಇಟ್ಟು ಕುಟುಂಬದ ಸದಸ್ಯರು ಪ್ರತಿಭಟಿಸಲು ಯತ್ನಿಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆ ಪೊಲೀಸರು, ಮಾಜಿ ಯೋಧನ ಕುಟುಂಬದ ಸದಸ್ಯರನ್ನು ಮನವೊಲಿಸಿ, ಪ್ರತಿಭಟನೆ ಕೈ ಬಿಡುವಂತೆ ಮಾಡಿದರು.

1969ರಲ್ಲಿ ಭಾರತ&ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಕೆಂಚಪ್ಪ ಸೋಮಣ್ಣ ಮೃತಪಟ್ಟಿದ್ದು, ಕುಟುಂಬಕ್ಕೆ ಜಮೀನು ಮಂಜೂರು ಮಾಡಲು ಆಗಿನ ಸರ್ಕಾರ ಸೂಚಿಸಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಸರ್ಕಾರಗಳು ಜಮೀನು ನೀಡದೆ, ಅನುಭವದಲ್ಲಿದ್ದ ಜಮೀನಿಗೂ ದಾಖಲೆ ನೀಡದೆ ವಿಳಂಬ ಮಾಡಿಕೊಂಡು ಬಂದಿತ್ತು. ದಾಖಲೆಗಳಿಗಾಗಿ ಶಾಂತಮ್ಮ ತಾಲೂಕು, ಸರ್ವೇ ಕಚೇರಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಗ ಪ್ರಕಾಶ್​ ಆರೋಪಿಸಿದರು.

ಸರ್ಕಾರದಿಂದ ಇದುವರೆಗೂ ದಾಖಲೆ ನೀಡದೆ ಸತಾಯಿಸಿದ್ದಾರೆ. 5ಎಕರೆ ಭೂಮಿ ಸರ್ವೇ ಮಾಡಿ ದಾಖಲೆ ನೀಡುವಂತೆ ಶಾಂತಮ್ಮ ಹೋರಾಟ ನಡೆಸಿಕೊಂಡು ಬಂದಿದ್ದಾರೆ. 1969ರಲ್ಲಿ ನಡೆದ ಭಾರತ್​, ಪಾಕಿಸ್ತಾನ ನಡುವೆ ನಡೆದ ಯುದ್ಧದಲ್ಲಿ ನಮ್ಮ ತಂದೆ ಮೃತಪಟ್ಟಿದ್ದಾರೆ. 40 ವರ್ಷಗಳ ಹೋರಾಟಕ್ಕೂ ಬೆಲೆ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು.

ನಮ್ಮ ತಾಯಿಗೆ ಮೂವರು ಮಕ್ಕಳು, ಜಮೀನಿನ ದಾಖಲೆಗಳಿಗಾಗಿ ಗೋಳಾಟ ನಡೆಸಿದ್ದಾರೆ ಎಂಬುದು ನಮಗೆ ಗೊತ್ತಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿದವರಿಗೆ ಸಮಾಜದಲ್ಲಿ ಸಿಕ್ಕ ಗೌರವ ಇದು, ಮಂತ್ರಿ, ಎಂಎಲ್​ಎ, ಎಂಪಿಗೆ ಯಾವುದೇ ರೀತಿ ಕಾಳಜಿಯಿಲ್ಲ ಎಂದು ದೂರಿದರು.