ಕೋಲಾರ ಜಿಲ್ಲಾಳಿತ ಭವನದ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್​. ರವಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ ಇದ್ದರು. 
ಜಿಲ್ಲೆ

ಯೋಜನೆ ಅನುಷ್ಠಾನದಲ್ಲಿ ವಿಳಂಬ ಸಲ್ಲ

ಕೋಲಾರ ಡೆಸ್ಕ್

ಕೋಲಾರ: ನೌಕರರು ತಮ್ಮ ಕೆಲಸಗಳಲ್ಲಿ ಬದ್ಧತೆ ತೋರಿಸಿ, ಸಾರ್ವಜನಿಕರ ಕೆಲಸಗಳನ್ನು ಕಾಳಜಿಯಿಂದ ಮಾಡಿಕೊಡಬೇಕು. ಕಂದಾಯ ಇಲಾಖೆಯು ಸರ್ಕಾರದ ಮಾತೃ ಇಲಾಖೆಯಾಗಿದ್ದು, ಕಂದಾಯ ಯೋಜನೆಗಳು ಜನಸಾಮಾನ್ಯರಿಗೆ ಸಮಬಾಳು ಕಲ್ಪಿಸುವಲ್ಲಿ ಪೂರಕವಾಗಿವೆ. ಇಂತಹ ಇಲಾಖೆಯ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳ ವಿಳಂಬ ನೀತಿ ಸಹಿಸಲಾಗದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​. ರವಿ ಎಚ್ಚರಿಸಿದರು.

ಜಿಲ್ಲಾಡಳಿತ ಭವನದ ನ್ಯಾಯಾಂಗ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಮೇಲಿರುವ ವಿಶ್ವಾಸ ಉಳಿಸಿಕೊಳ್ಳುವ ಕೆಲಸವನ್ನು ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ನಿರ್ವಹಿಸಬೇಕು. ಇಲಾಖೆಯ ಕಾರ್ಯವ್ಯಾಪ್ತಿ ಅಪರಿಮಿತವಾಗಿದ್ದು, ಅಧಿಕಾರಿ, ಸಿಬ್ಬಂದಿ ಸಕಾಲಕ್ಕೆ ಸರ್ಕಾರ ನೀಡುವ ಮಾರ್ಗಸೂಚಿಗಳಂತೆ ಕರ್ತವ್ಯ ಪಾಲನೆ ಮಾಡಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.

ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಋತುಮಾನಕ್ಕೆ ತಕ್ಕಂತೆ ಬರ ನಿರ್ವಹಣೆ, ಅತಿವೃಷ್ಟಿ ನಿರ್ವಹಣೆ ಸೇರಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯ ನಿರ್ವಹಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳ ಸೌಲಭ್ಯ ತಲುಪಿಸುವ ಹೊಣೆಗಾರಿಕೆ ಅಧಿಕಾರಿಗಳದ್ದು, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಇಲಾಖೆಯ ಎಲ್ಲ ಅಧಿಕಾರಿಗಳು ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸೂಚಿಸಿದರು.

ಪರಿಹಾರ ಪ್ರಗತಿ, ತಾಲೂಕು ಕಚೇರಿಗಳ ಕಟ್ಟಡ ಪ್ರಸ್ತಾವನೆ, ಆಧಾರ್​ ಸೀಡಿಂಗ್​, ದಾಖಲಾತಿಗಳ ನಿರ್ವಹಣೆ, ಭೂಮಿ, ತಹಸೀಲ್ದಾರ್​ ನ್ಯಾಯಾಲಯ ಪ್ರಕರಣಗಳು, ಆರ್​.ಟಿ.ಸಿ. ಮಿಸ್​ ಮ್ಯಾಚ್​ ಪ್ರಕರಣಗಳು, ಮೋಜಣಿ , ಕೃಷಿ ಭೂಮಿ ಪರಿವರ್ತನೆ, ಐ.ಪಿ.ಜಿ.ಆರ್​.ಎಸ್​, ಮುಖ್ಯಮಂತ್ರಿಗಳ ಜನತಾ ದರ್ಶನ, ಸಕಾಲ, ಇ-&ಆಫೀಸ್​ ಸೇರಿ ವಿವಿಧ ಮಾಸಾಶನಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಎಲ್ಲ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಬೇಕು ಹಾಗೂ ತಹಸೀಲ್ದಾರರು ಸಕಾಲಕ್ಕೆ ತಮ್ಮ ಹಂತದಲ್ಲಿ ಸಭೆ ಏರ್ಪಡಿಸಿ ಪ್ರಗತಿ ಕುರಿತು ಪರಿಶೀಲನೆ ಕೈಗೊಳ್ಳುವಂತೆ ಸೂಚಿಸಿದರು.

ತಿಂಗಳ ಅಂತ್ಯಕ್ಕೆ ನೋಂದಣಿ ಪೂರ್ಣವಾಗಲಿ: ಜಿಲ್ಲೆಯ ರೈತರು ತಮ್ಮ ಜಮೀನಿನ ನಿಖರವಾದ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಹಾರ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ಮಾಹಿತಿ ಒದಗಿಸಬೇಕು. ಜಿಲ್ಲೆಯಲ್ಲಿ ್ರೂಟ್​ ತಂತ್ರಾಂಶದಲ್ಲಿ ಈಗಾಗಲೇ ನೋಂದಣಿ ಮಾಡಲಾಗಿದ್ದು. ಬಾಕಿ ಉಳಿದ ರೈತರು ನೋಂದಣಿ ಕಾರ್ಯ ಜನವರಿ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದು ಡಿಸಿ ತಿಳಿಸಿದರು.

ಸರ್ಕಾರಿ ಭೂಮಿ ರಕ್ಷಣೆಗೆ ಲಾಂಡ್​ ಬೀಟ್​ ಪದ್ಧತಿ: ಸರ್ಕಾರಿ ಜಮೀನುಗಳ ರಕ್ಷಣೆಗೆ ಆ್ಯಪ್​ ಸಿದ್ಧಪಡಿಸಲಾಗಿದೆ. ಸರ್ಕಾರಿ ಜಮೀನುಗಳನ್ನು ಆ್ಯಪ್​ ಮೂಲಕ ಡೆಟಾಬೇಸನ್ನು ಸಿದ್ಧಪಡಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಜಾಗಗಳ ಸ್ಥಳಕ್ಕೆ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಭೂಮಿ ಒತ್ತುವರಿ ಆಗಿದೆಯೋ, ಇಲ್ಲವೋ ಎಂಬುವುದನ್ನು ಪರಿಶೀಲನೆ ನಡೆಸಿ, ಆ್ಯಪ್​ ಮೂಲಕ ಆ ಸ್ಥಳದಿಂದಲೇ ದೃಢೀಕರಿಸಿ ವರದಿಯನ್ನು ಅಪ್​ಲೋಡ್​ ಮಾಡಬೇಕು. ಒಂದು ವೇಳೆ ಸರ್ಕಾರಿ ಜಮೀನು ಒತ್ತುವರಿ ಆಗಿದ್ದಲ್ಲಿ ಆ್ಯಪ್​ ಬಳಸಿ ಆನ್​ಲೈನ್​ ಮೂಲಕವೇ ತಹಸೀಲ್ದಾರರಿಗೆ ವರದಿ ನೀಡಬೇಕು. ಈ ಪ್ರಕ್ರಿಯೆಯಿಂದ ಸರ್ಕಾರಿ ಭೂ-ಕಬಳಿಕೆ ನಿಯಂತ್ರಣಗೊಳ್ಳಲಿದೆ ಎಂದರು.

ಇ&-ಆಫೀಸ್​: ಕಂದಾಯ ಇಲಾಖೆ ಕೆಲಸ ಕಾರ್ಯಗಳೆಲ್ಲವೂ ಚುರುಕುಗೊಳಿಸುವ ನಿಟ್ಟಿನಲ್ಲಿ ಇ&-ಆಫೀಸ್​ ವ್ಯವಸ್ಥೆ ಅಳವಡಿಸಲಾಗಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂಪೂರ್ಣ ಬಳಸಿಕೊಳ್ಳುವ ಮೂಲಕ ಇ-&ಆಫೀಸ್​ ಮೂಲಕವೇ ಕಡತಗಳ ವಿಲೇವಾರಿಯಾಗಬೇಕು. ಇದರಿಂದ ವಿಳಂಭಕ್ಕೆ ವಿದಾಯ ದೊರೆತು, ಸರ್ಕಾರದ ಜನಪರ ಹಾಗೂ ಪಾರದರ್ಶಕ ಆಡಳಿತದ ಉದ್ದೇಶ ಸಾಕಾರಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದಾಖಲೆಗಳ ಡಿಜಿಟಲೀಕರಣ: ರೆಕಾರ್ಡ್​ ರೂಂನಲ್ಲಿರುವ ದಾಖಲೆಗಳನ್ನು ಸ್ಕ್ಯಾನ್​ ಮಾಡುವ ಮೂಲಕ ಶಾಶ್ವತವಾಗಿ ದಾಖಲೆಗಳನ್ನು ಉಳಿಸಲು ಡಿಜಿಟಲಿಕರಣ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ದಾಖಲೆಗಳ ಸೂಕ್ತ ರಕ್ಷಣೆಗೆ ಉತ್ತಮ ತಂತ್ರಾಂಶ ಅಭಿವೃದ್ಧಿ ಪಡಿಸಿ ರಕ್ಷಣೆ ಮಾಡುತ್ತೇವೆ ಎಂದು ಡಿಸಿ ತಿಳಿಸಿದರು. ಜನಸಾಮಾನ್ಯರಿಗೆ ಸುಲಭವಾಗಿ ಅವರಿಗೆ ಸಂಬಂಧಿಸಿದ ದಾಖಲೆಗಳು ಸಿಗುವಂತೆ ಮಾಡಲು ಕ್ರಮ ವಹಿಸಲಾಗುತ್ತಿದೆ.