ತಿ.ನರಸೀಪುರ: ನಾಯಕ ಮತ್ತು ಉಪ ಜಾತಿಗಳಿಗೆ ಪರಿಶಿಷ್ಟ ಪಂಗಡ(ಎಸ್‌ಟಿ) ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ತಲಕಾಡು ಗ್ರಾಮದ ನಾಡಕಚೇರಿ ಎದುರು ಗುರುವಾರ ತಿ.ನರಸೀಪುರ ತಾಲೂಕು ಯುವ ವೇದಿಕೆ ಹಾಗೂ ವಾಲ್ಮೀಕಿ ಯುವ ಬಳಗದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗ್ರಾಮದ ನಾಡಕಚೇರಿಯ ಮುಂಭಾಗ ಜಮಾವಣೆಗೊಂಡಿದ್ದ ತಾಲೂಕು ಯುವ ವೇದಿಕೆ ಸಂಘಟನೆ ಮತ್ತು ವಾಲ್ಮೀಕಿ ಯುವ ಬಳಗದ ಕಾರ್ಯಕರ್ತರು ಹಾಗೂ ಮುಖಂಡರು, ನಾಯಕ ಮತ್ತು ಉಪಜಾತಿಯ ಸಮುದಾಯಗಳಿಗೆ ಎಸ್‌ಟಿ ಸರ್ಟಿಫಿಕೇಟ್ ನೀಡಲು ಇಲ್ಲಸಲ್ಲದ ದಾಖಲಾತಿಗಳನ್ನು ಕೆೇಳುತ್ತಿರುವ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು.
ಯುವ ವೇದಿಕೆ ಅಧ್ಯಕ್ಷ ತಲಕಾಡು ಆನಂದ ಮಾತನಾಡಿ, ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವ ಮೊದಲು ಮತಕ್ಕಾಗಿ ಸಮುದಾಯದ ಬೆಂಬಲ ಪಡೆದು, ಅಧಿಕಾರಕ್ಕೇರುತ್ತಿದ್ದಂತೆ ಮರೆತು ಬಿಡುತ್ತಾರೆ. ಬೇರೆ ಯಾವುದೇ ಸಮುದಾಯದ ಜಾತಿ ಪ್ರಮಾಣ ಪತ್ರಕ್ಕೆ ಇಲ್ಲದ ನಿಬಂಧನೆಗಳನ್ನು ನಾಯಕ ಜಾತಿ ಸರ್ಟಿಫಿಕೇಟ್ ಪಡೆಯಲು ಹೇರಲಾಗುತ್ತಿದೆ. ಪ್ರತಿಯೊಂದಕ್ಕೂ ನಿಬಂಧನೆಗಳನ್ನು ಹಾಕುವ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರದ ಧೋರಣೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಹಕ್ಕೋತ್ತಾಯದ ಮನವಿ ಪತ್ರವನ್ನು ಉಪ ತಹಸೀಲ್ದಾರ್ ಈ.ಕುಮಾರ್ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಯುವ ವೇದಿಕೆಯ ಕಾರ್ಯದರ್ಶಿ ಮನುವಜ್ರ, ನಾಯಕ ಸಮುದಾಯದ ಮುಖಂಡರಾದ ಹೂವಯ್ಯ, ವಸಂತ್, ಮಧುಸೂದನ್, ರವಿ ಹೆಮ್ಮಿಗೆ, ಹೊನ್ನಯ್ಯ, ಸಾಗರ್, ಕುಕ್ಕೂರು ಅಭಿ, ಮಧು ಇತರರು ಇದ್ದರು.
ಈಗಿನ ಆಡಳಿತರೂಢ ಸರ್ಕಾರ ನಾಯಕ ಮತ್ತು ಉಪ ಜಾತಿ ಸಮುದಾಯಗಳಿಗೆ ಎಸ್ ಟಿ ಸರ್ಟಿಫಿಕೇಟ್ ನೀಡಲು ಇರುವ ನಿಬಂಧನೆಗಳನ್ನು ಸರಿಪಡಿಸಿ, ಗೊಂದಲವನ್ನ ಸರಿಪಡಿಸಲು ಆಗ್ರಹಿಸಿ ತಲಕಾಡಿನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ. ಅಧಿಕಾರಿಗಳು ಎಸ್‌ಟಿ ಸರ್ಟಿಫಿಕೇಟ್ ನೀಡಲು ವಿಳಂಬ ಧೋರಣೆ ಮುಂದುವರೆಸಿದರೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಬೆಂಗಳೂರು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗುತ್ತದೆ.
* ತಲಕಾಡು ಆನಂದ, ಅಧ್ಯಕ್ಷ, ತಾಲೂಕು ಯುವ ವೇದಿಕೆ