ಉಪ್ಪಿನಂಗಡಿ: ಈ ಬಾರಿ ಸುದೀರ್ಘ ಮಳೆ ಸುರಿದ ಕಾರಣ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ತೃಪ್ತಿದಾಯವಾಗಿದ್ದರೂ, ಬಿಳಿಯೂರು ನೇತ್ರಾವತಿ ನದಿಯ ಅಣೆಕಟ್ಟೆಗೆ ಗೇಟ್ ಅಳವಡಿಸುವ ಕಾರ್ಯ ವಿಳಂಬವಾಗಿರುವುದರಿಂದ ನದಿ ಪಾತ್ರದ ಕೃಷಿಕರಿಗೆ ನಿರಾಶೆ ಮೂಡಿದೆ. ಡಿಸೆಂಬರ್ ತಿಂಗಳ ಮಧ್ಯದವರೆಗೂ ಮಳೆ ಸುರಿಯುತ್ತಿದ್ದ ಕಾರಣ ನದಿಗಳೆರಡರಲ್ಲೂ ನೀರಿನ ಹರಿವು ಹೆಚ್ಚಿತ್ತು. ಈ ಕಾರಣಕ್ಕೆ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ನಡೆಯುತ್ತಿದ್ದ ಬಿಳಿಯೂರು ಅಣೆಕಟ್ಟಿಗೆ ಗೇಟ್ ಅಳವಡಿಸುವ ಪ್ರಕ್ರಿಯೆ ಮುಂದೂಡಲಾಗಿತ್ತು. ಇದೀಗ ನದಿಯಲ್ಲಿ ನೀರಿನ ಪ್ರಮಾಣ ಗಣನೀಯ ಇಳಿಕೆ ಕಾಣಿಸಲಾರಂಭಿಸಿದ್ದು, ಡಿಸೆಂಬರ್ ತಿಂಗಳ ಕೊನೇ ವಾರದಲ್ಲಿ ಅಣೆಕಟ್ಟೆಗೆ ಗೇಟ್ ಅಳವಡಿಸಿ ನೀರು ಸಂಗ್ರಹಿಸುವ ಕಾರ್ಯಕ್ಕೆ ಸಣ್ಣ ನೀರಾವರಿ ಇಲಾಖೆ ಮುಂದಾಗಲಿದೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿಕೊಂಡು ಮಳೆ ಸುರಿಯುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಮಳೆ ಸುರಿಯತೊಡಗಿದರೆ ಅಣೆಕಟ್ಟಿಗೆ ಗೇಟ್ ಅಳವಡಿಸುವ ಕಾರ್ಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ನದಿಯಲ್ಲಿ ನೀರಿನ ಪ್ರಮಾಣ ಇಳಿಯುತ್ತಿದ್ದು, ಯಾವುದೇ ಸಮಯದಲ್ಲಿ ಗೇಟು ಅಳವಡಿಸುವ ಬಗ್ಗೆ ನಿರ್ಧಾರ ತಳೆಯಲಾಗುವುದು. ಮಳೆ ಸುರಿಯದೇ ಇದ್ದರೆ ಡಿಸೆಂಬರ್ ಕೊನೆಯ ವಾರವಾಗಿರುವ ಈ ವಾರದಲ್ಲೇ ಅಣೆಕಟ್ಟಿಗೆ ಗೇಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಶಿವಪ್ರಸನ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ https://www.vijayavani.net/collection-of-information-by-forensic-officers https://www.vijayavani.net/kps-model-school-for-survey-village