ವಿಜಯಪುರ: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ‘ಮಾಡು ಇಲ್ಲವೇ ಮಡಿ’ ಹೋರಾಟಕ್ಕೆ ಸಿದ್ಧಗೊಂಡಿರುವುದಾಗಿ ಹೇಳಿರುವ ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಅವರು, ಆ.19ರೊಳಗಾಗಿ ವರದಿ ಜಾರಿಯಾಗದಿದ್ದರೆ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಆಡಳಿತ ಮಾಡಲು ಬಿಡುವುದಿಲ್ಲ. ರಕ್ತಪಾತವಾಗಲಿದೆ. ಎಲ್ಲದಕ್ಕೂ ಸಿದ್ಧಗೊಂಡು ನಿಂತಿರುವುದಾಗಿ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮಾತೆತ್ತಿದರೆ ದಲಿತ ನಾಯಕ ಎನ್ನುವ ಮಲ್ಲಿಕಾರ್ಜುನ ಖರ್ಗೆ, ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಬೀಗುವ ಸಿದ್ಧರಾಮಯ್ಯ ತಮ್ಮದೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ನೀಡಿದ ಭರವಸೆ ಈಡೇರಿಸುತ್ತಿಲ್ಲವೇಕೆ? ವರದಿಯಲ್ಲಿ ಲೋಪ-ದೋಷಗಳಿದ್ದರೆ ಸರಿಪಡಿಸಲು ಅವಕಾಶವಿದ್ದರೂ ಸರ್ಕಾರ ಸರಿಪಡಿಸಿ ಜಾರಿಗೊಳಿಸುತ್ತಿಲ್ಲವೇಕೆ? ತಾವೇ ನೇಮಕ ಮಾಡಿದ ಆಯೋಗಗಳ ವರದಿಯನ್ನು ಜಾರಿ ಮಾಡಲು ವಿಳಂಬ ಮಾಡುತ್ತಿರುವುದೇಕೆ? ಸರ್ಕಾರ ಯಾವುದೇ ರೀತಿಯಲ್ಲಿ ವರದಿ ಅನುಷ್ಟಾನಗೊಳಿಸಿದರೂ ನಮ್ಮ ಸಮ್ಮತಿಯಿದೆ. ಮೊದಲು ವರದಿ ಅನುಷ್ಟಾನಗೊಳ್ಳಲಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ಹಾವನೂರ ಆಯೋಗ, ಸದಾಶಿವ ಆಯೋಗ, ಕಾಂತರಾಜ ಆಯೋಗ, ನಾಗಮೋಹನದಾಸ ನೇತೃತ್ವದ ಆಯೋಗಗಳೆಲ್ಲವನ್ನೂ ಕಾಂಗ್ರೆಸ್ ನೇಮಕ ಮಾಡಿರುವಂಥದ್ದು. ಅದರಲ್ಲಿ ಜಾತಿ ವಿವರಗಳಿವೆ? ಎಲ್ಲ ಮಾಹಿತಿ ಕೈಯಲ್ಲೇ ಇದೆ. ಅದರಲ್ಲಿ ಯಾವುದೇ ವರದಿ ಜಾರಿ ಮಾಡಿದರೂ ನಮ್ಮ ಸಮ್ಮತಿಯಿದೆ. ಇಲ್ಲವಾದರೆ ಬಿಜೆಪಿ ಆಡಳಿತಾವಧಿಯಲ್ಲಿ ಸಲ್ಲಿಸಿದ ಮಾಧುಸ್ವಾಮಿ ವರದಿಯಾದರೂ ಜಾರಿಗೊಳಿಸಿ. ಅನವಶ್ಯಕವಾಗಿ ವಿಳಂಬ ಮಾಡಿ ದಲಿತರಲ್ಲಿ ಜಗಳ ಹಚ್ಚುವ ಕೆಲಸ ಬಿಡಿ. ಕಳೆದ 60 ವರ್ಷಗಳಿಂದ ದಲಿತರನ್ನು ಒಡೆದಾಳುತ್ತಲೇ ಬಂದಿದ್ದು, ಇದೀಗ ಮತ್ತದೇ ಚಾಳಿ ಮುಂದುವರಿಸುವುದನ್ನು ನಿಲ್ಲಿಸಿ ಎಂದರು.
ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟ ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಡಾ.ಬಾಬು ಜಗಜೀವನ ರಾಮ್ ಮತ್ತಿತರರು ಅಸ್ಪಶ್ಯತೆ ಹೋಗಲಾಡಿಸಿ ಸಮಾನ ಅವಕಾಶ ಕಲ್ಪಿಸಲು ಸಾಕಷ್ಟು ಹೋರಾಟ ನಡೆಸಿದ ಫಲ 1950ರಲ್ಲಿ ಮೀಸಲಾತಿ ವ್ಯವಸ್ಥೆ ಜಾರಿಗೆ ಬಂತು. ಅಲ್ಲಿಯವರೆಗೂ ಮನುಷ್ಯರಿಂದಲೇ ಮನುಷ್ಯರ ಶೋಷಣೆ ಹೆಚ್ಚಾಗಿತ್ತು. ತಲೆ ಮೇಲೆ ಮಲಹೊರುವವರು, ಕಸಗುಡಿಸಿ, ಗಟಾರ್ ಬಳೆದು ಜೀವನ ಮಾಡುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿತ್ತು. ಅದಕ್ಕೆ ಅಂಬೇಡ್ಕರ್ ನೇತೃತ್ವದಲ್ಲಿ ಈ ಜನಾಂಗವನ್ನು ಮೇಲೆತ್ತಲು ಮೀಸಲಾತಿ ಕಲ್ಪಿಸಲಾಯಿತು. ಆರಂಭದಲ್ಲಿ ಪರಿಶಿಷ್ಟ ಜಾತಿಯಲ್ಲಿ 6 ಹಾಗೂ ಪರಿಶಿಷ್ಟ ಪಂಗಡದಲ್ಲಿ 6 ಜಾತಿಗಳಿದ್ದರು. ಇದೀಗ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಹಾಗೂ ಪರಿಶಿಷ್ಟ ಪಂಗಡದಲ್ಲಿ 56 ಜಾತಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಪರಿಣಾಮ ತುಳಿತಕ್ಕೆ ಒಳಗಾದವರು ಉಳಿದವರ ಜೊತೆ ಪೈಪೋಟಿ ಮಾಡಲಾಗದ ಕಾರಣಕ್ಕೆ ಒಳಮೀಸಲಾತಿ ಅನಿವಾರ್ಯವಾಗಿದೆ ಎಂದರು.
ಒಳಮೀಸಲಾತಿಗಾಗಿ ಆಂಧ್ರದಿಂದ ಮಾದಿಗರ ಮೀಸಲಾತಿ ಹೋರಾಟ ಆರಂಭವಾಯಿತು. ಹೋರಾಟ ರಾಜ್ಯಕ್ಕೂ ವಿಸ್ತರಿಸಿತು. ಆಗ ಸಿಎಂ ಆಗಿದ್ದ ಎಸ್.ಎಂ. ಕೃಷ್ಣ ಅವರು 2004ರಲ್ಲಿ ನ್ಯಾ.ಸದಾಶಿವ ಆಯೋಗವನ್ನೇನೋ ರಚಿಸಿದರು. ಆದರೆ, ಅನುದಾನವಾಗಲಿ, ಸೌಲಭ್ಯವಾಗಲಿ ಕೊಡಲಿಲ್ಲ. ಹೀಗಾಗಿ ವರದಿ ಸಿದ್ಧವಾಗಲಿಲ್ಲ. ಬಳಿಕ 2008 ರಲ್ಲಿ ಬಿ.ಎಸ್. ಯಡಿಯೂರಪ್ಪ ಅಧಿಕಾರವಧಿಯಲ್ಲಿ ನ್ಯಾಯಮೂರ್ತಿ ಸದಾಶಿವ ಅವರು ಆಯೋಗಕ್ಕೆ ರಾಜೀನಾಮೆ ಕೊಡಲು ಮುಂದಾದಾಗ ಸ್ವತಃ ಯಡಿಯೂರಪ್ಪ ಅವರ ಬಳಿ ಹೋಗಿ 15 ಕೋಟಿ ರೂಪಾಯಿಗೆ ಬೇಡಿಕೆ ಇರಿಸಿದ್ದೆ. ಆಗ ಯಡಿಯೂರಪ್ಪ 13 ಕೋಟಿ ರೂಪಾಯಿ ನೀಡಲಾಗಿ ರಾಜ್ಯದ 29 ಸಾವಿರ ಹಳ್ಳಿಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿ ಸದಾಶಿವ ಆಯೋಗ 2009 ರಲ್ಲಿ ವರದಿ ನೀಡಿತು. ಆಗ ಬಿಜೆಪಿಗೆ ಬಹುಮತ ಇಲ್ಲದ ಕಾರಣ ವರದಿ ಸ್ವೀಕರಿಸಲು ಆಗಲಿಲ್ಲ. ಯಾವುದೇ ಪಕ್ಷ ಅಧಿಕಾರ ಕಳೆದುಕೊಳ್ಳಲು ಇಷ್ಟಪಡದ ಕಾರಣ ಆ ವರದಿ ನೆನೆಗುದಿಗೆ ಬಿದ್ದಿತು ಎಂದರು.
2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಒಳಮೀಸಲಾತಿ ಕೊಡುವುದಾಗಿ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ನಮೂದಿಸಿತು. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ದರೂ ಒಳಮೀಸಲಾತಿ ಜಾರಿಗೊಳಿಸಲಿಲ್ಲ. ಅನಧಿಕೃತವಾಗಿ ಅಂಕಿ-ಸಂಖ್ಯೆ ಬಿಡುಗಡೆಗೊಳಿಸಿ ರೀ ಜಗಳ ಹಚ್ಚುವ ಕೆಲಸ ಮಾಡಿದರು. ಬಳಿಕ ಕೊರಮ, ಕೊರಚದವರಿಗೆ ಮೀಸಲಾತಿ ಕಸಿಯುವ ಹುನ್ನಾರ ನಡೆದಿದೆ ಎಂದು ಬಿಜೆಪಿ ವಿರುದ್ಧ ಹುನ್ನಾರ ನಡೆಸಿದರು. ಹೀಗಾಗಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಮಾಧುಸ್ವಾಮಿ ನೇತೃತ್ವದಲ್ಲಿ ಕಮೀಟಿ ರಚಿಸಿ ಎಲ್ಲ ಜಾತಿಯವರನ್ನು ಸದಸ್ಯರನ್ನಾಗಿಸಲಾಯಿತು. ಆ ಕಮೀಟಿ ಎಲ್ಲ ವರ್ಗದ ಜನರ ಅಭಿಪ್ರಾಯ ಪಡೆದು 2023 ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದಾಗ ಲಂಬಾಣಿ ಹಾಗೂ ಬೋವಿ ಜನಾಂಗದವರನ್ನು ಎತ್ತಿ ಕಟ್ಟಿ ಯಡಿಯೂರಪ್ಪ ಅವರ ಮನೆಗೆ ಕಲ್ಲು ಹೊಡಿಸಿದರು. ಹೀಗಾಗಿ ಅದಷ್ಟಕ್ಕೇ ಉಳಿಯಿತು. ಆರು ಇದ್ದ ಜಾತಿ 101 ಆದರೂ ನಾವೆಲ್ಲರನ್ನೂ ಒಪ್ಪಿಕೊಂಡೇ ಮುನ್ನಡೆದಿದ್ದೇವೆ. ಆದರೆ ಕಾಂಗ್ರೆಸ್ ಮಾತ್ರ ಎಸ್‌ಸಿ ಜನಾಂಗದಲ್ಲಿ ಜಗಳ ಹಚ್ಚುವ ಕೆಲಸ ಮಾಡಿಕೊಂಡೇ ಬಂತು.
ಈ ಎಲ್ಲ ಕಾರಣಗಳಿಂದಾಗಿ ಅಸಲಿ ಹಿಂದುಳಿದ ಚಾಂಪಿಯನ್ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಮುತುವರ್ಜಿ ವಹಿಸಲಾಗಿ ನ್ಯಾಯಾಲಯದ ಮೊರೆ ಹೋಗಿ ಸುಪ್ರೀಂಕೋರ್ಟ್‌ನಿಂದಲೇ 2024 ಆ.15 ಕ್ಕೆ ತೀರ್ಪು ಬಂತು. ನೆರೆಯ ರಾಜ್ಯಗಳೆಲ್ಲವೂ ಒಳಮೀಸಲಾತಿ ತೀರ್ಪು ಸ್ವಾಗತಿಸಿ ಅನುಷ್ಟಾನಗೊಳಿಸಿದರೂ ಕಾಂಗ್ರೆಸ್ ಸರ್ಕಾರ ಮಾತ್ರ ಜಾರಿಗೊಳಿಸಲೇ ಇಲ್ಲ. ದಲಿತರ ಮಧ್ಯೆ ಜಗಳ ಹಚ್ಚುವುದು ತಾವು ಮಾತ್ರ ವಿಧಾನ ಸೌಧದಲ್ಲಿ ಬೆಣ್ಣಿ ತಿನ್ನುವುದನ್ನು ಮಾಡುತ್ತಿದ್ದಾರೆ. ಇನ್ಮುಂದೆ ಸಹಿಸಲಾಗಲ್ಲ. ಮಾಡು ಇಲ್ಲವೇ ಮಡಿ ಹೋರಾಟ ಅನಿವಾರ್ಯ ಎಂದರು.