ಜಿಲ್ಲೆ

ಸಂಪರ್ಕಿತರ ಗುರುತಿಸುವಲ್ಲಿ ವಿಳಂಬ, ವಿಶೇಷ ಜಿಲ್ಲಾಧಿಕಾರಿ ಬಸವರಾಜು ಬೇಸರ ಖಾಸಗಿ ಆಸ್ಪತ್ರೆಗೆ ಹೋಗುವವರು ಹಣ ನೀಡಬೇಕು

Bengaluru Rural

ಆನೇಕಲ್: ಕರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸುವಲ್ಲಿ ವಿಳಂಬವಾಗುತ್ತಿರುವುದರಿಂದ ತಾಲೂಕಿನಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿವೆ ಎಂದು ವಿಶೇಷ ಜಿಲ್ಲಾಧಿಕಾರಿ ಬಸವರಾಜು ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮಾಹಿತಿ ಬಂದ ತಕ್ಷಣ ಘಟನಾ ತಪಾಸಣಾ ತಂಡದಿಂದ ಸ್ಥಳಕ್ಕೆ ಭೇಟಿ ನೀಡಬೇಕು. ಸೋಂಕಿತರನ್ನು ವೆಂಟಿಲೇಟರ್ ಇರುವ ಆಸ್ಪತ್ರೆಗೆ ಸಾಗಿಸುವುದು ಕಡ್ಡಾಯ. ಸುವರ್ಣ ಆರೋಗ್ಯ ತಪಾಸಣೆಯಲ್ಲಿ ನೋಂದಣಿಯಾಗಿರುವ ಆಸ್ಪತ್ರೆಗೆ ಹೋದಲ್ಲಿ ವೆಚ್ಚ ಭರಿಸುವ ಅಗತ್ಯ ಇಲ್ಲ. ಖಾಸಗಿ ಆಸ್ಪತ್ರೆಗೆ ಹೋಗುತ್ತೇವೆ ಎನ್ನುವವರು ಸ್ವಂತ ಖರ್ಚಿನಲ್ಲಿ ಹೋಗಬಹುದು ಎಂದರು.

ಡಿವೈಎಸ್ಪಿ ನಂಜುಂಡೇಗೌಡ ಮಾತನಾಡಿ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಖಾಸಗಿಯವರನ್ನು ತಾಲೂಕು ಆಡಳಿತದಿಂದ ನೀಡುವುದಾಗಿ ತಹಸಿಲ್ದಾರರು ಹೇಳಿದ್ದು, ಅಗತ್ಯವಿರುವೆಡೆ ಹೆಚ್ಚಿನ ಭದ್ರತೆ ನೀಡಲು ಇಲಾಖೆ ಸಿದ್ಧವಿದೆ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ.ಜ್ಞಾನಪ್ರಕಾಶ್ ಮಾತನಾಡಿ, ಕೆಲವು ಮಾರುಕಟ್ಟೆಗಳಲ್ಲಿ ಅಂತರವಿಲ್ಲದೆ ವ್ಯವಹಾರ ಮಾಡುತ್ತಿದ್ದು, ಆದಷ್ಟು ಬೇಗ ಸಂತೆಯನ್ನು ವಾರಕ್ಕೆ ಒಂದು ಬಾರಿ ಮಾತ್ರ ನಡೆಸಬೇಕು ಎಂದರು.

ಪಟ್ಟಣದ ಆಕ್ಸ್‌ರ್ಡ್ ಆಸ್ಪತ್ರೆಯಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮಾಡಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.

ಅಡಿಷನಲ್ಲಿ ಎಸ್ಪಿ ಸುಜೀತ್ ಮಾತನಾಡಿ, ಪ್ರತಿ ನಿತ್ಯ ಕಂಟೇನ್ಮೆಂಟ್ ಪ್ರದೇಶ ಹೆಚ್ಚಾಗುತ್ತಿವೆ. ಠಾಣೆಗಳಲ್ಲಿ ಬೇರೆ ಪ್ರಕರಣಗಳ ಜತೆ ಕರೊನಾ ಪ್ರಕರಣ ನಿಭಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.

ನಮ್ಮ ವ್ಯಾಪ್ತಿಯಲ್ಲಿ 239 ಕಂಟೈನೇಂಟ್ ಪ್ರದೇಶಗಳಿದ್ದು, ಸಿಬ್ಬಂದಿ ಕೂಡ ಇಂತಹ ಪ್ರದೇಶಗಳಲ್ಲಿ ನಿಯಮಗಳ ಪ್ರಕಾರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಗೆ ಬ್ಯಾರಿಕೇಡ್‌ಗಳದ್ದೆ ದೊಡ್ಡ ಸಮಸ್ಯೆಯಾಗಿದೆ. ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಬೇಕಾದ ಸಲಕರಣೆ ನೀಡಿದರೆ ಸಹಾಯವಾಗುತ್ತದೆ ಎಂದರು.

ತಹಸೀಲ್ದಾರ್ ಮಹದೇವಯ್ಯ ಮಾತನಾಡಿ, ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಮನೆಗೆ ಸೇರಿಸಿಕೊಳ್ಳುವುದರಿಂದ ಕರೊನಾ ಸೋಂಕು ಹೆಚ್ಚಾಗಿದೆ ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಕ್ವಾರಂಟೈನ್‌ಗಾಗಿ 50ರಿಂದ 100 ಕೊಠಡಿಗಳಿರುವ ಎರಡು ಹೋಟೆಲ್‌ಗಳನ್ನು ತೆಗೆದುಕೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜೇಗೌಡ, ಆನೇಕಲ್ ವೃತ್ತ ನಿರೀಕ್ಷಕ ಕೃಷ್ಣ ಲಮಾಣಿ, ಜಿಗಣಿ ವೃತ್ತ ನಿರೀಕ್ಷಕ ಕೆ.ವಿಶ್ವನಾಥ್, ಅತ್ತಿಬೆಲೆ ವೃತ್ತ ನಿರೀಕ್ಷಕ ಸತೀಶ್, ಆನೇಕಲ್ ಪುರಸಭಾ ಮುಖ್ಯಾಧಿಕಾರಿ ರಾಮ್ ಪ್ರಕಾಶ್ ಹಾಜರಿದ್ದರು.