ಸೋರಲಮಾವು ಶ್ರೀಹರ್ಷ ತುಮಕೂರು
ಗುಬ್ಬಿ ತಾಲೂಕು ಸಿ.ಎಸ್.ಪುರ ಹೋಬಳಿ ವೀರಣ್ಣನಗುಡಿಯಲ್ಲಿರುವ ವೀರಭದ್ರೇಶ್ವರಸ್ವಾಮಿ ಭಕ್ತರ ಕಷ್ಟಗಳನ್ನು ಈಡೇರಿಸುವ ಪುಣ್ಯಕ್ಷೇತ್ರವಾಗಿದೆ.
ತನ್ನ ತಾತನಾದ ದುರಹಂಕಾರಿ ದಕ್ಷಬ್ರಹ್ಮನ ಸಂಹಾರ ಮಾಡಿ ವೀರಭದ್ರೇಶ್ವರ ನೆಲೆಗೊಂಡ ತಾಣ ವೀರಣ್ಣನ ಗುಡಿ. ಕ್ಷೇತ್ರದಲ್ಲಿ ಏ.10ರಿಂದ 16ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ತಯಾರಿ ಕೂಡಾ ನಡೆದಿದೆ.
ಲೋಕದೊಡೆಯ ಪರಮೇಶ್ವರನು ತನ್ನ ಮಾವ ದಕ್ಷಬ್ರಹ್ಮನ ಅಹಂಕಾರ ಮುರಿಯಲೆಂದು ಅವಕಾಶಕ್ಕಾಗಿ ಕಾಯುತ್ತಿದ್ದ. ಒಮ್ಮೆ ಹಬ್ಬಕ್ಕೆಂದು ಶಚಿದೇವಿ ತನ್ನ ತಂದೆ ದಕ್ಷಬ್ರಹ್ಮನನ್ನು ಕರೆಯಲು ಮನೆಗೆ ಹೋದಾಗ ಕೋಪಗೊಂಡ ದಕ್ಷಬ್ರಹ್ಮ ಮಗಳನ್ನು ಅವಮಾನಿಸಿದ, ವಿಷಯ ತಿಳಿದ ಪರಮೇಶ್ವರರ ನೃತ್ಯದ ಆರ್ಭಟಕ್ಕೆ ಭೂಮಿಗೆ ಬಂದವನೇ ಶ್ರೀವೀರಭದ್ರಸ್ವಾಮಿ ಎಂಬ ನಂಬಿಕೆ ಜನರಲ್ಲಿದೆ. ತಾತ ದಕ್ಷಬ್ರಹ್ಮನ ಸಂಹಾರ ಮಾಡಿ ಶಾಂತನಾಗಿ ವೀರಭದ್ರಸ್ವಾಮಿ ನೆಲೆಗೊಂಡ ತಾಣವೇ ವೀರಣ್ಣನಗುಡಿಯಾಗಿದ್ದು, ಪ್ರತಿನಿತ್ಯವೂ ನೂರಾರು ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಜಾತ್ರೆ ಸಂದರ್ಭದಲ್ಲಿ ಸಾವಿರಾರು ಜನರ ಸಮಾಗಮವೇ ಆಗುತ್ತದೆ. ಬಹುದೊಡ್ಡ ಮೈದಾನದಲ್ಲಿ ದ್ರಾವಿಡ ಶೈಲಿಯ ದೇವಾಲಯದ ಮುಖ್ಯದ್ವಾರದಲ್ಲಿ 4 ಕೆತ್ತನೆಯ ಕಂಬಗಳಿವೆ, ಎಡಭಾಗದ ಮೊದಲ ಕಂಬದಲ್ಲಿ ರಾಮಾಂಜನೇಯ, ಹೂವು, ಪರಶುರಾಮ, ಗಣಪ, ಮತ್ಸಾೃವತಾರ, ನರ್ತಕಿ, ಬಸವಣ್ಣನ ವಿಗ್ರಹ ಕೆತ್ತಲಾಗಿದೆ.
2ನೇ ಕಂಬದಲ್ಲಿ ನಿಂತಿರುವ ಗಂಡಬೇರುಂಡ, ನವಿಲು, ಸಿಂಹ, ನಟರಾಜ, ಹೂವಿನ ಚಿತ್ರವಿದೆ. ಮಾರ್ಕಂಡೇಯ, ಜಿಂಕೆ, ಹೂವು, ಬೇಡರಕಣ್ಣಪ್ಪ, ಸುಬ್ರಹ್ಮಣ್ಯ ನಕ್ಷತ್ರಾಕಾರದ ಚಂದ್ರನ ಕೆತ್ತನೆಗಳಿವೆ. ಹೀಗೆ ಒಂದೊಂದು ಕಂಬದಲ್ಲಿಯೂ ಹಲವು ಕೆತ್ತನೆಗಳಿವೆ.
ದೇವಾಲಯದ ಆವರಣದಲ್ಲಿಯೇ ಗಣಪತಿ, ಭದ್ರಕಾಳಮ್ಮ, ಈಶ್ವರನ ದೇವಾಲಯಗಳು ಹಾಗೂ ನಾಗಬನವಿದ್ದು, ಭಕ್ತರಿಗೆ ಸಕಲ ಮೂಲಸೌಕರ್ಯ ಕಲ್ಪಿಸಲಾಗಿದೆ.
ದೇವಾಲಯದಲ್ಲಿ ವಿಶೇಷ
*ಅಮಾವಾಸ್ಯೆ ವಿಶೇಷ ಪೂಜೆ
*ಸ್ವಾಮಿ ಮೇಲಿನ ನೀರು ಹಾಕಿಸಿಕೊಳ್ಳುತ್ತಾರೆ
*ಮಾನಸಿಕ ಕಾಯಿಲೆ ದೂರ, ನಾಗರಪೂಜೆ.
*ಕಾರ್ತಿಕದಲ್ಲಿ ಲಕ್ಷ ದೀಪೋತ್ಸವ, ಬೆಳ್ಳಿ ಪಲ್ಲಕ್ಕಿ, ಕಲ್ಯಾಣೋತ್ಸವ
14ರಂದು ಬ್ರಹ್ಮರಥೋತ್ಸವ ಜಾತ್ರಾ ಮಹೋತ್ಸವ ಏ.16ರವರೆಗೆ ನಡೆಯಲಿದ್ದು, ದಿ.ಎನ್.ವೀರಣ್ಣಗೌಡ ಜ್ಞಾಪಕಾರ್ಥವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಏ.10ರಂದು ರುದ್ರಾಭಿಷೇಕ, ಧ್ವಜಾರೋಹಣ, ರುದ್ರಾಭಿಷೇಕ, 11ರಂದು ನಂದಿ ಉತ್ಸವ, ನಂದಿಧ್ವಜಪೂಜೆ, 12ರಂದು ಆರತಿ ಅಗ್ನಿಕೊಂಡ, ಕಲ್ಯಾಣೋತ್ಸವ, 13ರಂದು ಚಂದ್ರ ಮಂಡಲೋತ್ಸವ ಹಾಗೂ 14ರಂದು ಗುರುವಾರ ಬೆಳಗ್ಗೆ ರುದ್ರಾಭಿಷೇಕ, ಮಧ್ಯಾಹ್ನ 1ಕ್ಕೆ ಬ್ರಹ್ಮರಥೋತ್ಸವ, ಸಂಜೆ ಬೆಳ್ಳಿಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಲಿದೆ. ಏ.15ರಂದು ಕುದುರೆ ಉತ್ಸವ, 16ರಂದು ಓಕಳಿ ಉತ್ಸವ ನಡೆಯಲಿದೆ. 800 ವರ್ಷಗಳ ಬಿಲ್ವಪತ್ರೆ ಮರ ದೇವಾಲಯದ ಆವರಣದಲ್ಲಿಯೇ ಸುಮಾರು 800 ವರ್ಷಗಳಿಗೂ ಹಳೆಯದಾದ ಬಿಲ್ವಪತ್ರೆ ಮರವಿದೆ. ಸದಾ ಸುವಾಸನೆ ಬೀರುವ ವೈಶಿಷ್ಟ್ಯ ಹೊಂದಿರುವ ಈ ಮರದ ಕೆಳಗೆ ಕುಳಿತು ಧ್ಯಾನಿಸುವುದು ಭಕ್ತರಿಗೆ ಅಚ್ಚುಮೆಚ್ಚು.
ವೀರಣ್ಣಗುಡಿ ಕ್ಷೇತ್ರ ಸಿ.ಎಸ್.ಪುರ ಮಾರ್ಗದಲ್ಲಿದೆ. ತುಮಕೂರಿನಿಂದ ಹೆಬ್ಬೂರು ಮಾರ್ಗವಾಗಿ 38 ಕಿಮೀ ಹಾಗೂ ಗುಬ್ಬಿಯಿಂದ 24 ಕಿಮೀ ದೂರದಲ್ಲಿದ್ದು ಬಸ್‌ಸೌಕರ್ಯವಿಲ್ಲ. ಆಟೋ ಅಥವಾ ಸ್ವಂತ ವಾಹನದಲ್ಲಿ ಇಲ್ಲಿಗೆ ತಲುಪಬಹುದು.ಗುಡಿ ತಲುಪುವುದು ಹೇಗೆ?
ಪುರಾಣ ಕಥೆಯಲ್ಲಿ ಏನಿದೆ? ಧಾರ್ಮಿಕ ಕ್ಷೇತ್ರವಾಗಿರುವ ವೀರಣ್ಣ ಗುಡಿ ಸಮೀಪದಲ್ಲಿಯೇ ನಾಗಹೊಳೆ ಹರಿಯುತ್ತಿತ್ತು, ಇಲ್ಲಿ ನೆಲೆಸಿದ್ದ ಋಷಿಮುನಿಗಳು ಸ್ನಾನ, ಪೂಜೆ, ನೈವೇದ್ಯಗಳಿಗೆ ಈ ನದಿ ನೀರು ಬಳಸುತ್ತಿದ್ದರು. ಶಿವಗಂಗೆ ಬೆಟ್ಟದಿಂದ ಹುಟ್ಟುವ ಈ ನಾಗಹೊಳೆ ಗುಬ್ಬಿ, ತುರುವೇಕೆರೆ ತಾಲೂಕುಗಳ ಗಡಿಭಾಗದ ಕಡಬಾ ಬಳಿ ಶಿಂಷಾನದಿ ಸೇರುತ್ತದೆ. 800 ವರ್ಷಗಳ ಹಿಂದೆ ಈ ನದಿಯಲ್ಲಿ ಪ್ರವಾಹ ಬಂದು ಇಡೀ ವೀರಣ್ಣಗುಡಿ ಗ್ರಾಮವೇ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದಾಗ ಗ್ರಾಮಸ್ಥರೆಲ್ಲಾ ನೀರಿನಲ್ಲಿ ತೇಲಿಕೊಂಡು ಬಂದು ವೀರಭದ್ರೇಶ್ವರನ ಬೇಡಿದರು. ವೀರಭದ್ರನು ಅಡಕೆಪಟ್ಟೆ ಮಾಡಿ ನೀರಿನಲ್ಲಿ ತೇಲಿಬಿಟ್ಟು ಸಿ.ಎಸ್.ಪುರ ಕೆರೆಗೆ ನೀರು ಬಿಟ್ಟು ಜನರನ್ನು ರಕ್ಷಿಸಿದನು. ಅಡಕೆಪಟ್ಟಿ ಕೆರೆಯ ಮಧ್ಯಭಾಗದಲ್ಲಿ ಮುಳುಗಿತು, ಇದೇ ಜಾಗವೀಗ ದೊಡ್ಡ ಹೊಂಡವಾಗಿದೆ ಎಂಬ ಐಹಿತ್ಯವಿದೆ. ಈ ಒಡಲಿಗೆ ವೀರಭದ್ರೇಶ್ವರನ ಹೊಂಡ ಎಂದೇ ಕರೆಯಲಾಗುತ್ತಿದೆ. ಕ್ಷೇತ್ರದ ನಿರ್ಮಾತೃ ಎನ್.ವೀರಣ್ಣಗೌಡ ಕ್ಷೇತ್ರ ವೀರಣ್ಣನ ಗುಡಿಯ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ದಿ.ಎನ್.ವೀರಣ್ಣಗೌಡರ ಕೊಡುಗೆ ಅಪಾರ. ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ ವೀರಣ್ಣಗೌಡರು ಮೃತಪಟ್ಟಾಗ ಗ್ರಾಮಸ್ಥರೇ ದೇವಾಲಯದ ಆವರಣದಲ್ಲಿಯೇ ಅವರ ಅಂತ್ಯಕ್ರಿಯೆ ನೆರವೇರಿಸಿ ಸಮಾಧಿ ನಿರ್ಮಿಸಿದ್ದಾರೆ. ಜರ್ಮನ್ ವಾಸ್ತುಶಿಲ್ಪ ಬಳಸಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅವರ ಸಮಾಧಿಗೆ ದೇವಾಲಯಕ್ಕೆ ಆಗಮಿಸುವ ಭಕ್ತರೆಲ್ಲಾ ಬಂದು ವಂದಿಸುವುದು ಅಭ್ಯಾಸವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ನಾಯಕನ ಸ್ಮರಣೆಯನ್ನು ಜನ ಇಂದಿಗೂ ಮರೆತಿಲ್ಲ. ಪ್ರಸ್ತುತ ದೇವಾಲಯ ಜೀಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ವಿ.ಪುಟ್ಟಸ್ವಾಮಿ, ಕಾರ್ಯದರ್ಶಿ ಟಿ.ಎನ್.ಶಿವರುದ್ರಯ್ಯ, ಕಾರ್ಯಾಧ್ಯಕ್ಷ ಎಂ.ವಿ.ಬಸವರಾಜು ಮತ್ತಿತರರು ಅವಿರತವಾಗಿ ದೇಗುಲದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ವೀರಣ್ಣನಗುಡಿಯ ವೀರಭದ್ರಸ್ವಾಮಿ ಈ ಭಾಗದ ಎಲ್ಲ ಸಮುದಾಯಗಳ ನಂಬಿಕೆಯ ದೇವರೆನಿಸಿಕೊಂಡಿದೆ. ಕಷ್ಟದ ಸಂದರ್ಭದಲ್ಲಿಯೂ ದೇಗುಲಕ್ಕೆ ಆಗಮಿಸಿ ಪರಿಹಾರ ಕಂಡುಕೊಂಡವರಿದ್ದಾರೆ. ಪ್ರತಿನಿತ್ಯ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಶ್ರೀಧರ್ ದೀಕ್ಷಿತ್ ಪ್ರಧಾನ ಅರ್ಚಕ