ಜಿಲ್ಲೆ

ನಂಬಿದ ಭಕ್ತರನ್ನು ಕಾಯುವ ಮಾರಮ್ಮ

ನಾಗೇಶ ಎಸ್

ಸರಗೂರು: ಹಾದನೂರು ಗ್ರಾಮದಲ್ಲಿ ಶಕ್ತಿ ದೇವತೆ ಮಾರಮ್ಮ ನೆಲೆಸಿದ್ದು, ಜನರ ಕಷ್ಟಗಳನ್ನು ಈಡೇರಿಸುವ ಶಕ್ತಿ ದೇವತೆಯಾಗಿ ಹೆಸರಾಗಿದ್ದಾಳೆ.

ಚೋಳರ ಕಾಲದಲ್ಲಿ ಹಾದನೂರು ಗ್ರಾಮ ಬಳಿ ಕಾಡಿನಲ್ಲಿ ಗ್ರಾಮದವರು ದನಕರುಗಳನ್ನು ಮೇಯಿಸಲು ಹೋಗಿದ್ದಾಗ ಅವರಿಗೆ ತಾಯಿಯ ದರ್ಶನವಾಗುತ್ತದೆ. ಅಂದಿನಿಂದ ಪೂಜೆ, ಪುನಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು. ನಂತರ ಹಾದನೂರು ಮತ್ತು ಬಡಗಲಪುರ ಎರಡು ಊರಿನ ಗ್ರಾಮಸ್ಥರು ದೇವಸ್ಥಾನದ ನಿರ್ವಹಣೆ ಜವಾಬ್ದಾರಿಯನ್ನು ತೆಗೆದುಕೊಂಡರು.

ಹಾದನೂರು ಮತ್ತು ಬಡಗಲಪುರ ಗ್ರಾಮಸ್ಥರು ಸೇರಿಕೊಂಡು ದೊಡ್ಡ ಮಟ್ಟದಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಜನರು, ದಾನಿಗಳಿಂದ ಹಣ ಸಂಗ್ರಹಿಸಿ ದೊಡ್ಡ ದೇಗುಲ ನಿರ್ಮಾಣ ಮಾಡಿದ್ದಾರೆ. ಎರಡು ಊರಿನ ಗ್ರಾಮಸ್ಥರು ಸೇರಿಕೊಂಡು ಮಾರಮ್ಮನ ಜಾತ್ರಾ ಮಹೋತ್ಸವ ಆಚರಿಸುತ್ತಾರೆ. 10 ವರ್ಷಗಳ ಹಿಂದೆ ಗಲಭೆ ಉಂಟಾಗಿ ಹಾದನೂರು ಮತ್ತು ಬಡಗಲಪುರ ಗ್ರಾಮಸ್ಥರು ಮಾರಮ್ಮನ ಹಬ್ಬವನ್ನು ನಿಲ್ಲಿಸಿದ್ದರು. ಈಗ ಗ್ರಾಮ ದೇವತೆ ಮಾರಮ್ಮನ ಹಬ್ಬ ನಿಲ್ಲಿಸಬಾರದು ಎಂದು ಹಾದನೂರು ಗ್ರಾಮಸ್ಥರು ಹಬ್ಬವನ್ನು ವಿಜೃಂಭಣೆಯಿಂದ ಮಾಡಿಕೊಂಡು ಬರುತ್ತಿದ್ದಾರೆ.

ಮಾರ್ಚ್ ತಿಂಗಳಲ್ಲಿ ಎರಡು ದಿನ ಕಾಲ ಸಡಗರದಿಂದ ಜಾತ್ರೆ ನಡೆಯುತ್ತದೆ. ಮೊದಲಿಗೆ ಅಮ್ಮನವರ ಭರಣಿ, ಘಂಟೆ, ಧೂಪದೊಂದಿಗೆ ಕಟ್ಟೆಯ ಮೇಲೆ ದೇವಿಗೆ ಇಷ್ಟವಾದ ಬೇವಿನ ಸೊಪ್ಪನ್ನಿಟ್ಟು ಅರ್ಚಕರು ಪೂಜೆ ಸಲ್ಲಿಸುತ್ತಾರೆ. ಕೆಲವರು ತಲೆಗೆ ರುಮಾಲು ಸುತ್ತಿಕೊಂಡು ಅದರಲ್ಲಿ ಬೇವಿನ ಸೊಪ್ಪು ಸಿಕ್ಕಿಸಿಕೊಂಡು ಮನೆ ಮನೆಗೆ ತೆರಳಿ ಇನ್ನು 3 ದಿನಕ್ಕೆ ಜಾತ್ರೆ ನಡೆಸಲಾಗುತ್ತದೆ ಎಂದು ಡಂಗುರ ಸಾರುತ್ತಾರೆ. ಬಳಿಕ ಊರಿನ ಕಲ್ಲಿಗೆ ಪೂಜೆ ಸಲ್ಲಿಸುವುದೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.

ಸುಣ್ಣ, ಬಣ್ಣ ಬಳಿದು ದೇವಸ್ಥಾನದ ಸುತ್ತ ದೀಪಾಲಂಕಾರ, ಹಸಿರು ತೋರಣ ಮಾಡಲಾಗುವುದು. ಗ್ರಾಮದ ಕೆರೆಯಲ್ಲಿ ಗಂಗೆ ಪೂಜೆ ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಗ್ರಾಮದ ಪ್ರಮುಖ ಸಮುದಾಯಗಳಾದ ದಲಿತ, ಲಿಂಗಾಯತ, ವೀರಶೈವ, ಆದಿವಾಸಿ ಬುಡಕಟ್ಟು ಜನಾಂಗದ ಸೇರಿದಂತೆ ಎಲ್ಲರಿಗೂ ಮಾರಮ್ಮ ಶಕ್ತಿ ದೇವತೆ. ಹೀಗಾಗಿ ಎಲ್ಲ ಸಮುದಾಯದವರು ದೇವಿಯ ಉತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಹಾದನೂರು ಮಾರಮ್ಮ ನಡೆಯುವ ಜಾತ್ರೆಗೆ ಎಚ್.ಡಿ.ಕೋಟೆ, ಸರಗೂರು ಹಾಗೂ ನಂಜನಗೂಡು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.