ದೊಡ್ಡಬಳ್ಳಾಪುರದ ವಿದ್ಯಾನಿಧಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ.ದಿನೇಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ರಂಗನಾಥ, ಉಪನ್ಯಾಸಕರಾದ ಜಯರಾಮ್, ಚೇತನ್, ತೇಜಸ್ವಿನಿ, ಶಿವಾನಂದ್, ಶ್ರೀಧರ್, ಶಮಬೇಗಂ ಭಾಗವಹಿಸಿದ್ದರು. 
ಜಿಲ್ಲೆ

ಶಿಕ್ಷಣದಿಂದ ಆತ್ಮವಿಶ್ವಾಸ ಹೆಚ್ಚಳ

ಶಿವರಾಜ.ಎಂ

*ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ಅನಿಸಿಕೆ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಜಗತ್ತಿನ ಬದಲಾವಣೆಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸಿದೆ. ಶಿಕ್ಷಣವು ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸುವುದರ ಜತೆಗೆ ಜೀವನದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ತಿಳಿಸಿದರು.
ನಗರದ ವಿದ್ಯಾನಿಧಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ವಿಪುಲವಾದ ಅವಕಾಶಗಳಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಪ್ರಾರಂಭವಾಗುತ್ತಿವೆ. ಇವುಗಳ ಸದುಪಯೋಗವನ್ನು ಯುವಕರು ಪಡೆದುಕೊಳ್ಳಬೇಕು. ವೃತ್ತಿ ಜೀವನದಲ್ಲಿ ಸಹ ಉತ್ಸಾಹ ಲವಲವಿಕೆ ಹೊಂದಿರಬೇಕು ಎಂದರು.
ವಿದ್ಯಾರ್ಥಿಗಳು ನಮ್ಮ ನಾಡು ನುಡಿಯ ಹಿರಿಮೆಯನ್ನು ಅರಿಯಬೇಕು. ಕನ್ನಡ ನಾಡು ನುಡಿಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಕನ್ನಡ ಪ್ರಜ್ಞೆ ಮತ್ತು ಕರ್ನಾಟಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ದಿನಪತ್ರಿಕೆಗಳನ್ನು ಮತ್ತು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ನಿರಂತರವಾಗಿ ಇರಬೇಕು. ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ನಾವು ಅರಿಯುವುದರೊಂದಿಗೆ ನಮ್ಮ ಜೊತೆಯವರಿಗೂ ಅರಿವು ಮೂಡಿಸಬೇಕು. ಕನ್ನಡಿಗರು ಎಷ್ಡೇ ಭಾಷೆ ಕಲಿತರೂ ಕನ್ನಡ ಭಾಷೆಯನ್ನು ಮರೆಯಬಾರದು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಮಾನವೀಯ ಗುಣಗಳನ್ನು ಅಳವಡಿಸಿಕೊಂಡಾಗ ನಾವು ಕಲಿತ ವಿದ್ಯೆಗೆ ಮತ್ತು ಹುದ್ದೆಗೆ ಗೌರವ ಬರುತ್ತದೆ. ಸ್ಪರ್ಧಾತ್ಮಕ ಕಾಲದಲ್ಲಿ ಪ್ರತಿಭೆಗೆ ಮನ್ನಣೆ ದೊರೆಯುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ವಿದ್ಯೆ ಮತ್ತು ಕೌಶಲ ಪಡೆಯಬೇಕು. ಬಸವಣ್ಣ ಮತ್ತು ಶರಣರು ಕಾಯಕ ಪ್ರಜ್ಞೆಯ ಮಹತ್ವವನ್ನು ಸಾರಿದರು. ಬಸವಣ್ಣನವರ ಆರ್ಥಿಕ ಮತ್ತು ಸಾಮಾಜಿಕ ಚಿಂತನೆ ಸಮಾಜ ಬದಲಾವಣೆಗೆ ಸಹಕಾರಿ ಆಯಿತು ಎಂದರು.