ಜಿಲ್ಲೆ

ದೇಶ ರಕ್ಷಣೆಯೇ ರಕ್ಷಾ ಬಂಧನ

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿಂದೂ ಸಂಪ್ರದಾಯದಲ್ಲಿ ಸಹೋದರರಿಗೆ ಒಂದು ನೂಲಿನ ಕಂಕಣ ಕಟ್ಟುವ ಮೂಲಕ ಮಾನ, ಪ್ರಾಣ ಕಾಪಾಡುವ ಸಂಕಲ್ಪದೊಂದಿಗೆ ಬಂಧುತ್ವ ಗಟ್ಟಿಗೊಳಿಸುವ ಮೂಲಕ ದೇಶ ರಕ್ಷಣೆ ಮಾಡುವುದೇ ರಕ್ಷಾ ಬಂಧನ. ಇದರಿಂದ ನಮ್ಮ ಭಾವ ಜಾಗೃತವಾಗುತ್ತದೆ. ಇದೆಲ್ಲ ನಮ್ಮ ಸದ್ಗುಣಗಳ ಪೂಂಜವಾಗಿದೆ. ನಾವೆಲ್ಲ ಒಂದೇ ಎನ್ನುವ ಭಾವನೆ ಬಂದಾಗ ಮಾತ್ರ ನಮ್ಮ ದೇಶದ ಸಂಸ್ಕೃತಿ ಬೆಳೆಯಲು ಸಾಧ್ಯ ಎಂದು ವಿಧಾನ ಪರಿಷತ್​ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.
ನಗರದ ಬೇಂದ್ರೆ ಭವನದಲ್ಲಿ ಶ್ರೀ ವಾಲ್ಮೀಕಿ ಸಾಂಸ್ಕೃತಿಕ ಹಾಗೂ ಕ್ರೀಡಾ ಯುವ ಸಂಘ, ಸ್ಫೂರ್ತಿ ಟ್ರಸ್ಟ್​ ಹಾಗೂ ವನವಾಸಿ ಕಲ್ಯಾಣ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಶ್ರಾವಣೋತ್ಸವ ಸಂಭ್ರಮ ಹಾಗೂ ರಕ್ಷಾ ಬಂಧನ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರದಲ್ಲಿ ಹಿಮಾಲಯ, ದಕ್ಷಿಣದಲ್ಲಿ ಹಿಂದೂ ಮಹಾಸಾಗರವಿದೆ. ಇವೆರಡರ ನಡುವೆ ಇರುವುದೇ ನಮ್ಮ ಭವ್ಯ ಭಾರತ. ಈ ದೇಶ ನಮಗೆ ದೇವರ ಸಮಾನ. ಹೀಗಾಗಿ ಅದನ್ನು ತಾಯಿ ಸ್ವರೂಪದಲ್ಲಿ ಭಾರತ ಮಾತೆ ಎಂದು ಕರೆಯುತ್ತೇವೆ. ಭೂಮಿ, ಕಲ್ಲು, ಮಣ್ಣು, ಗಿಡ-ಮರ ಎಲ್ಲವನ್ನೂ ಪೂಜಿಸುತ್ತೇವೆ. ಹಿಂದೂ ಸಂಸ್ಕೃತಿಯಲ್ಲಿ ಹಬ್ಬಗಳು ಸರತಿಯಂತೆ ಬರುತ್ತವೆ, ಅದರಲ್ಲೂ ಶ್ರಾವಣ ಮಾಸ ಪೂಜೆ-ಪುನಸ್ಕಾರಗಳಿಗೆ ಶ್ರೇಷ್ಠ ಕಾಲ ಎಂದರು.
ಕೃಷಿ ವಿವಿ ಡೀನ ಡಾ. ಸರೋಜಿನಿ ಕರಕಣ್ಣವರ ಮಾತನಾಡಿ, ನಾವು ನಮ್ಮ ಮಕ್ಕಳಿಗೆ ಭಾರತೀಯ ಕಲೆ, ಸಾಹಿತ್ಯ, ಸಂಸ್ಕಾರ ನೀಡುವ ಅಗತ್ಯವಿದೆ ಎಂದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಎಂ.ಗೌತಮ ರೆಡ್ಡಿ, ಸರ್​ ಸಿದ್ಧಪ್ಪ ಕಂಬಳಿ ಕಾನೂನು ಕಾಲೇಜಿನ ಪ್ರಾಧ್ಯಾಪಕಿ ಡಾ. ಶಶಿರೇಖಾ ಮಾಳಗಿ, ವನವಾಸಿ ಕಲ್ಯಾಣ ನಗರ ಸಮಿತಿ ಕಾರ್ಯದರ್ಶಿ ಎನ್​.ಆರ್​.ಕುರುಂದವಾಡ ಮಾತನಾಡಿದರು.
ನಂತರ ಜರುಗಿದ ಸಮೂಹ ಗಾಯನದಲ್ಲಿ ಯೋಗಮಿತ್ರ ಮಹಿಳಾ ಮಂಡಳ (ಪ್ರಥಮ), ವಿದ್ಯಾ ಜೋಶಿ ತಂಡ (ದ್ವಿ), ಸಮೂಹ ನೃತ್ಯದಲ್ಲಿ ಕ್ವೀನ್​ ಬೀಸ್​ (ಪ್ರ), ಗಗನ ಮಣಕಿಲ್ಲಾ (ದ್ವಿ), ನಂದಿಕೋಲ ಬಸವೇಶ್ವರ ಯೋಗಕೇಂದ್ರ (ತೃ) ಸ್ಥಾನ ಹಾಗೂ ರಾಖಿ ತಯಾರಿಯಲ್ಲಿ ವಿದ್ಯಾ ಗಬ್ಬೂರ (ಪ್ರ), ವಿಜಯಲಕ್ಷ್ಮೀ ಕಬಾಡಿ (ದ್ವಿ), ಸಂಗೀತ ಮುರಗೋಡ (ತೃ) ಸ್ಥಾನ ಪಡೆದರು.
ಶಿವಾಜಿ ಕಡ್ಡೆಪ್ಪನವರ, ಪ್ರದಿಪ ಗಾವಡೆ, ಇತರರು ಇದ್ದರು. ರೂಪಾ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಗಾವಡೆ ನಿರೂಪಿಸಿದರು. ಶಾರದಾ ರಾಯಚೂರ ವಂದಿಸಿದರು.