ಜಿಲ್ಲೆ

ದ್ವೇಷ ರಾಜಕಾರಣ ಸೋಲಿಸಿ, ಸಂವಿಧಾನ ಉಳಿಸಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಪ್ರಜಾತಂತ್ರದಲ್ಲಿ ನಮಗೆ ಸಿಕ್ಕಿರುವ ಮತ್ತು ದಕ್ಕಿಸಿಕೊಂಡಿರುವ ಹಕ್ಕುಗಳನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ನಾವೀಗ ಎಚ್ಚರ ತಪ್ಪಿದರೆ ಪಶ್ಚಾತ್ತಾಪ ಪಡಬೇಕಾದೀತು. ತಪ್ಪದೆ ಮತ ಹಾಕೋಣ. ದ್ವೇಷ ರಾಜಕಾರಣವನ್ನು ಸೋಲಿಸಿ ಸಂವಿಧಾನ ಉಳಿಸೋಣ ಎಂದು ಸಮಾನ ಮನಸ್ಕ ಸಂಘಟನೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ , ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಕರೆ ನೀಡಿವೆ.


ಈ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಹೊರತಂದಿರುವ ಭಾರತದ ಮಹಿಳೆಯರ ಸ್ಥಿತಿಗತಿಗಳು; 2014-24ರ ದಶಕಗಳ ಅನುಭವ ಕುರಿತು ಕಿರು ಪುಸ್ತಕ ಮತ್ತು ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.


ಮನುವಾದಿ, ಕೋಮುವಾದಿ, ಸ್ತ್ರೀ ವಿರೋಧಿ ಪಕ್ಷ, ಮತ್ತದರ ಮಿತ್ರ ಪಕ್ಷಗಳನ್ನು ತಿರಸ್ಕರಿಸುವುದೊಂದೇ ದಾರಿ ನಮಗೀಗ ಉಳಿದಿರುವುದು ಎಂದು ತಿಳಿಸಿದೆ.
ಮಹಿಳೆಯರಿಗೆ ಘನತೆಯ ಬದುಕನ್ನು ಖಾತ್ರಿಪಡಿಸುವ ಸಂವಿಧಾನದ ಅಡಿಯಲ್ಲೇ ಇಂಚಿಂಚಾಗಿ ಅವಳ ಬದುಕನ್ನೇ ಹರಿದು ಮುಕ್ಕುವ ಕೃತ್ಯಗಳು ರಾಜಾರೋಷವಾಗಿ ಜಾರಿಯಲ್ಲಿವೆ. ಸಾವಿರಾರು ಜನರ ಗುಂಪುಗೂಡಿ ಮಹಿಳೆಯರನ್ನು ಬೆತ್ತಲೆ ಮಾಡಿ, ಕಿರುಕುಳ ನೀಡುತ್ತ ಮೆರವಣಿಗೆ ಮಾಡಿ ಅತ್ಯಾಚಾರವೆಸಗಿ ಕೊಲೆಗೈದರೂ ಕನಿಷ್ಠ ಖಂಡಿಸುತ್ತಿಲ್ಲ. ಪರೋಕ್ಷ ಸಮರ್ಥನೆ ಮಾಡುವ ಪಲಾಯನವಾದಿಗಳನ್ನು ಪುನರಾಯ್ಕೆ ಮಾಡಬೇಕೇ? ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದೆ

.
ಮಹಿಳೆ, ಆದಿವಾಸಿ, ಗಂಡ ಸತ್ತ ಮಹಿಳೆ ಎನ್ನುವ ಕಾರಣಕ್ಕೆ ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯುವ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಾಧ್ಯಕ್ಷರನ್ನೇ ಆಹ್ವಾನಿಸದವರು ದೇಶದ ಸಾಮಾನ್ಯ ಮಹಿಳೆಯರಿಗೆ ಇನ್ನೇನು ಗೌರವ ನೀಡಬಲ್ಲರು? ಎಂದೂ ಪ್ರಶ್ನಿಸಿದೆ.


ಬರಗಾಲದಿಂದ ಜನ ತತ್ತರಿಸುವಾಗಲೂ ಸಾಂವಿಧಾನಿಕ ಕರ್ತವ್ಯವಾಗಿ ಕೇಂದ್ರದಿಂದ ಬರಬೇಕಾದ ತೆರಿಗೆದಾರರ ಹಕ್ಕಿನ ಹಣ ಕೇಳಿ ತರುವ ಬದಲು ರಾಜಕೀಯ ಬೆರೆಸಿ ಆಟವಾಡುತ್ತಿರುವವರನ್ನು ಕರ್ನಾಟಕದಿಂದ ಮತ್ತೆ ಆಯ್ಕೆ ಮಾಡಿ ಕಳಿಸೋಣವೇ? ಮತ ನಿರಪೇಕ್ಷ ಸಂವಿಧಾನದ ಮೂಲಕವೇ ಆಯ್ಕೆಯಾಗಿ ಬಂದು ಧರ್ಮ, ಧರ್ಮಗಳ ಮಧ್ಯೆ ದ್ವೇಷ ಅಸಹನೆ, ಹಿಂಸೆಗಳನ್ನು ಪ್ರಚೋದಿಸುವ ಸಂವಿಧಾನ ವಿರೋಧಿಗಳಿಗೆ ಮತ್ತೆ ಅವಕಾಶ ನೀಡಬೇಕೇ? ಮತದಾರರು ಒಮ್ಮೆ ಆಲೋಚಿಸಬೇಕು ಎಂದು ಮನವಿ ಮಾಡಿದ್ದಾರೆ.


ಪ್ರೊ.ಕೆ.ಕಾಳಚನ್ನೇಗೌಡ, ಡಾ.ರತಿ ರಾವ್, ಕೆ.ಆರ್.ಸುಮತಿ, ಸುಶೀಲಾ, ದೇವಿ ಮಂಡ್ಯ, ಡಾ.ಸಬೀಹಾ ಭೂಮಿಗೌಡ, ಡಾ. ಲಕ್ಷ್ಮೀನಾರಾಯಣ, ನಾ. ದಿವಾಕರ, ವಕೀಲ ಆರ್.ಲಕ್ಷ್ಮಣ್ , ಸವಿತಾ ಪ.ಮಲ್ಲೇಶ್, ಭರತ್‌ರಾಜ್, ಜಗನ್ನಾಥ್ ಸೂರ್ಯ, ಆಶಾ ಸುಶೀಲಾ, ಸುನಂದಾ, ಲಿಂಗರಾಜಮೂರ್ತಿ, ಶಿವರಾಜು ಇದ್ದರು.