ಜಿಲ್ಲೆ

ಬಿಜೆಪಿ ಸೋಲಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ

ರಾಜಣ್ಣ

ತಿ.ನರಸೀಪುರ: ಬಿಜೆಪಿ ಸರ್ಕಾರ ಯಾವುದೇ ಜನಪರವಾದ ಅಭಿವೃದ್ಧಿ ಕೆಲಸ ಮಾಡದೆ ಸುಳ್ಳು, ಮೋಸ, ವಂಚನೆಯಲ್ಲಿ ತೊಡಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮನವಿ ಮಾಡಿದರು.


ತಾಲೂಕಿನ ಸೋಸಲೆ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಪುತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರವಾಗಿ ಮತಯಾಚಿಸಿ ಮಾತನಾಡಿದರು.


ಬಿಜೆಪಿಗೆ ಅಭಿವೃದ್ಧಿ ಬೇಕಿಲ್ಲ, ಅಂತೆ ಕಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಪ್ರಚಾರ ಮಾಡುವುದು, ಮನಸ್ಸುಗಳನ್ನು ಕೆಡಿಸುವುದು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರ ಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮಗೆ ಜನರಿಗೆ ಭಾವನೆ ಮುಖ್ಯವಲ್ಲ, ಬದುಕು ಮುಖ್ಯ. ಹಾಗಾಗಿ ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ ಜನಗಳ ಶ್ರೇಯೋಭಿವೃದ್ಧಿಗೆ ಬೇಕಾದ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತರುವ ಪಕ್ಷ ಎಂದರು.


ಸುನೀಲ್ ಬೋಸ್ ಗೆಲ್ಲಿಸಿಕೊಡಿ: 2008ರಿಂದಲೂ ಸುನೀಲ್ ಬೋಸ್ ನಮ್ಮೊಂದಿಗೆ ಪಕ್ಷದ ಕೆಲಸ ಮಾಡುತ್ತಾ ನಿಮ್ಮ ಪ್ರೀತಿ ವಿಶ್ವಾಸ ಗಳಿಸಿದ್ದಾನೆ. 16 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ಕೆಲಸ ಮಾಡಿದ್ದಾನೆ. ಆತ ಎಂಎಲ್‌ಸಿ, ಎಂಪಿಯಾಗಬೇಕೆಂಬ ಹೋರಾಟ ಕ್ಷೇತ್ರದ ಜನತೆಯದ್ದಾಗಿತ್ತು. ಆತನಿಗೆ ಪಕ್ಷದ ಟಿಕೆಟ್ ಸಿಗದೇ ಹೋದರೂ ಬೇಜಾರಾಗದೆ ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡಿದ್ದಾನೆ. ಕ್ಷೇತ್ರದ ಜನತೆಯ ಕಷ್ಟ ಸುಖದಲ್ಲಿ ಭಾಗಿಯಾಗಿ ಎಲ್ಲರಿಗೂ ಸ್ಪಂದಿಸಿದ್ದಾನೆ. ಈಗ ಆತನಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿದೆ. ಈ ಬಾರಿಯ ಚುನಾವಣೆಯಲ್ಲಿ ನೀವೆಲ್ಲ ಎಚ್ಚರಿಕೆಯಿಂದ ಮತ ಹಾಕಬೇಕಿದೆ. ಹೆಚ್ವಿನ ಮತಗಳನ್ನು ಕೊಟ್ಟು ಗೆಲ್ಲಿಸಿ ಕೊಡಬೇಕು ಎಂದರು.


ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಮಾಜಿ ಸದಸ್ಯ ಹೊನ್ನನಾಯಕ, ವಕೀಲರ ಸಂಘದ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಉಕ್ಕಲಗೆರೆ ಬಸವಣ್ಣ, ದೊಡ್ಡೇ ಬಾಗಿಲು ಮಲ್ಲಿಕಾರ್ಜುನಸ್ವಾಮಿ, ಸೋಸಲೆ ಪರಶಿವಮೂರ್ತಿ, ನಿಂಗಯ್ಯ, ಮಹದೇವಸ್ವಾಮಿ, ಮೈಮುಲ್ ನಿರ್ದೇಶಕ ಓಂ ಪ್ರಕಾಶ್, ಪಪಂ ಮಾಜಿ ಅಧ್ಯಕ್ಷ ಬಸವಣ್ಣ, ಮಹದೇವಸ್ವಾಮಿ, ವಾಟಾಳು ನಾಗೇಶ್, ಗದ್ದೇಮೊಳೆ ಸಿದ್ದರಾಜು, ಚಿನ್ನಸ್ವಾಮಿ, ಶಿವರಾಮು, ಗ್ರಾಪಂ ಅಧ್ಯಕ್ಷೆ ಚಾಂದಿನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ಜಿಪಂ ಮಾಜಿ ಸದಸ್ಯರಾದ ಸುಧಾ ಮಹದೇವಯ್ಯ, ತಲಕಾಡು ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷರಾದ ರಾಜೇಶ್, ವಾಟಾಳ್ ನಾಗೇಶ್, ತಾಪಂ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ತಾಪಂ ಮಾಜಿ ಸದಸ್ಯ ಗಣೇಶ್, ರಂಗಸ್ವಾಮಿ, ಕೆಬ್ಬೇ ಶಿವಸ್ವಾಮಿ, ಕೊಳತ್ತೂರು ಕುಮಾರ್, ಕೆಪಿಸಿಸಿ ಸದಸ್ಯ ಸುಂದರನಾಯಕ, ಮೂಗೂರು ಸಾಗರ್ ಮತ್ತಿತರರಿದ್ದರು.