ಜಿಲ್ಲೆ

ಕಾರು-ಕ್ರೂಸರ್ ನಡುವೆ​ ಮುಖಾಮುಖಿ ಡಿಕ್ಕಿ: ಮಹಿಳೆ ಸೇರಿ ಇಬ್ಬರು ಸಾವು, ಬಾಲಕನ ಸ್ಥಿತಿ ಗಂಭೀರ

mahalakshmihm

ಕಲಬುರಗಿ: ಕಾರು ಮತ್ತು ಕ್ರೂಸರ್​ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಭೀಮನಾಳ ಕ್ರಾಸ್ ಬಳಿ ನಡೆದಿದೆ.

ಭಾನುವಾರ ಬೆಳಗ್ಗೆ ಸಂಭವಿಸಿದ ಈ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆಯೋರ್ವಳು ಮೃತಪಟ್ಟಿದ್ದು, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಕೊನೆಯುಸಿರೆಳೆದಿದ್ದಾನೆ.

ತೆಲಂಗಾಣದ ಮಹ್ಮದ್ ಅಬ್ದುಲ್ ಮಜೀದ್ ಸಿದ್ದಿಕಿ (71) ಮತ್ತು ಖುನ್ನಿಸಾ ಬೇಗಂ (55) ಮೃತ ದುದೈವಿಗಳು. ಮೃತರಿಬ್ಬರು ಕಾರಿನಲ್ಲಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಹುಸೇನ್ (7) ಎಂಬ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಫರಹತ್ ಸುಲ್ತಾನಾ ಮತ್ತು ಅರ್ಜುಮನ ಸುಲ್ತಾನ ಎಂಬುವರು ಗಾಯಗೊಂಡಿದ್ದಾರೆ.

ತೆಲಂಗಾಣದಿಂದ ಕಲಬುರಗಿಯ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಬರುತ್ತಿದ್ದ ಕಾರು, ಕಲಬುರಗಿಯಿಂದ ಬೀದರನ ಗುರುನಾನಕ ದೇಗುಲಕ್ಕೆ ತೆರಳುತ್ತಿದ್ದ ಕ್ರೂಸರ್ ಮುಖಾಮುಖಿ ಡಿಕ್ಕಿಯಾಗಿದೆ. ಕ್ರೂಸರ್​ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)