ಜಿಲ್ಲೆ

ಹಸಿರು ಪಟಾಕಿ ವ್ಯಾಪಾರ ಜೋರು

ಪವನ್ ಆಚಾರ್ಯ ನೀರ್ಚಾಲು

ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು

ನಗರದಲ್ಲಿ ಹಸಿರು ಪಟಾಕಿ ವ್ಯಾಪಾರ ಜೋರಾಗಿದ್ದು, ಬಸವನಗುಡಿ, ರಾಜಾಜಿನಗರ ಹೀಗೆ ಹಲವು ಪ್ರಮುಖ ಪ್ರದೇಶಗಳಲ್ಲಿರುವ ಮೈದಾನಗಳಲ್ಲಿ ವ್ಯಾಪಾರಿಗಳು ಒಂದೇ ಸೂರಿನಡಿ ಮಾರಾಟ ಮಾಡುತ್ತಿದ್ದಾರೆ.

ಶುಕ್ರವಾರ ರಾತ್ರಿ ಮಳೆಯಿಂದಾಗಿ ವ್ಯಾಪಾರಕ್ಕೆ ಸ್ವಲ್ಪ ಹಿನ್ನಡೆಯಾದರೂ ಶನಿವಾರ ಬೆಳಗ್ಗೆಯಿಂದ ವ್ಯಾಪಾರ ಜೋರಾಗಿ ನಡೆದಿದೆ. ಬೆಳಕಿನ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಹಕರು ಗುಂಪು ಗುಂಪಾಗಿ ಪಟಾಕಿ ಖರೀದಿಗೆ ಮುಗಿಬೀಳುತ್ತಿದ್ದಾರೆ.

ಪಟಾಕಿ ಮಾರುಕಟ್ಟೆ ಬೆಲೆ: ಹಿಂದಿನ ವರ್ಷಕ್ಕೆ ಹೋಲಿಸಿದರೆ ಪಟಾಕಿಯ ಬೆಲೆಯಲ್ಲಿ ತುಂಬ ವ್ಯಾತ್ಯಾಸವೇನೂ ಆಗಿಲ್ಲ. ಪಟಾಕಿಗೆ ಬಳಸುವ ಪೇಪರ್​, ಕೆಮಿಕಲ್​ ಇತ್ಯಾದಿ ಕಚ್ಚಾವಸ್ತುಗಳಿಗೆ ಜಿಎಸ್​ಟಿ ದರ ಕಡಿಮೆಯಾದುದರಿಂದ ಕೆಲವು ಪಟಾಕಿಯ ಬೆಲೆ ತುಂಬ ಕಡಿಮೆ ಆಗಿದೆ. ಕೆಲವು ಪಟಾಕಿಗಳು ಅದರ ವಿನ್ಯಾಸ ಹಾಗೂ ವೈಶಿಷ್ಟ$್ಯದ ಆಧಾರದಲ್ಲಿ ಬೆಲೆ ಹೆಚ್ಚಿರುವುದು ಇದೆ. ಒಟ್ಟಿನಲ್ಲಿ ಸುಮಾರು ಶೇ.5 ಬೆಲೆ ಏರಿಕೆಯಾಗಿದೆ. ಸರ್ಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲ ಸೂಚನೆಗಳನ್ನು ಪಾಲಿಸಲಾಗುತ್ತಿದ್ದು, ಮಾರಾಟದಲ್ಲಿ ಇರುವ ಪಟಾಕಿಗಳೆಲ್ಲವೂ ಹಸಿರು ಪಟಾಕಿಗಳಾಗಿವೆ. 10 ರೂ.ನಿಂದ ಪ್ರಾರಂಭವಾಗಿ 5 ಸಾವಿರ ರೂ. ಮೌಲ್ಯದ ಪಟಾಕಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಲಯನ್​, ಕ್ರಿಕೆಟ್​ ಬ್ಯಾಟ್​, ಹೆಲಿಕಾಪ್ಟರ್​ ಸೇರಿ ವಿವಿಧ ರೀತಿಯ ವಿಶೇಷ ಪಟಾಕಿಗಳು ಈ ಬಾರಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಪಟಾಕಿ ಖರೀದಿ ವೇಳೆ ಪಾಲಕರ ಜತೆ ಮಕ್ಕಳು ಇರುವುದು ಕಂಡುಬಂತು.

ಮಕ್ಕಳ ಸಂತೋಷಕ್ಕಾಗಿ, ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪಟಾಕಿಗಳನ್ನು ಖರೀದಿಸಲು ಬಂದಿದ್ದೇನೆ. ಕಳೆದ ಬಾರಿ ಇದ್ದ ದರಕ್ಕಿಂತ ಈ ಬಾರಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ ಎಂದು ವ್ಯಾಪಾರಿಗಳು ಹೇಳುತ್ತಿದ್ದರೂ ಪಟಾಕಿಗಳ ಬೆಲೆ ನೋಡಿದರೆ ಗ್ರಾಹಕರಿಗೆ ಏನೂ ಅನುಕೂಲವಾಗುತ್ತಿಲ್ಲ. ನಾನು 800 ರೂ.ನ ಪ್ಯಾಕ್​ ಖರೀದಿಸಿದೆ. ಹಸಿರು ಪಟಾಕಿಗೆ ಒತ್ತು ನೀಡುತ್ತಿರುವುದು ಒಳ್ಳೆಯ ಸಂಗತಿ. > ರಾವೇಂದ್ರ, ಜಗಜೀವನರಾಮ್​ನಗರ ಶುಕ್ರವಾರ ರಾತ್ರಿ ಮಳೆಯಾದ್ದರಿಂದ ಪಟಾಕಿ ಖರೀದಿಗೆ ಗ್ರಾಹಕರು ಸ್ವಲ್ಪ ಹಿಂದಡಿ ಇಟ್ಟಿದ್ದರು. ಶನಿವಾರ ಮಧ್ಯಾಹ್ನದ ನಂತರ ಗ್ರಾಹಕರು ಗುಂಪುಗುಂಪಾಗಿ ಬರುತ್ತಿದ್ದು ವ್ಯಾಪಾರ ಜೋರಾಗಿದೆ. ನಾವು ಪರಿಸರಸ್ನೇಹಿ ಪಟಾಕಿಗಳಿಗೆ ಆದ್ಯತೆ ನೀಡುತ್ತಿದ್ದು, ತಮಿಳುನಾಡಿನ ಶಿವಕಾಶಿಯಿಂದ ಪೂರೈಕೆಯಾಗುತ್ತಿದೆ. ಈ ಬಾರಿ ಶೆ.5 ಪಟಾಕಿ ದರ ಏರಿಕೆ ಆಗಿದೆ. > ಮಧುಸೂದನ್​, ವ್ಯಾಪಾರಿ, ಮಲ್ಲೇಶ್ವರ ಜನರಿಗೆ ಪಟಾಕಿ ಸಿಡಿಸುವ ಹುಮ್ಮಸ್ಸು ಯಾವತ್ತೂ ಕಡಿಮೆ ಆಗುವುದಿಲ್ಲ. ಮಕ್ಕಳು ಹೆಚ್ಚಾಗಿ ಪಟಾಕಿಗಳತ್ತ ಆಕರ್ಷಿತರಾಗುತ್ತಾರೆ. ನಮ್ಮ ಮಳಿಗೆಗೂ ಸಂಜೆ 4ರಿಂದ ರಾತ್ರಿ 8ರವತರೆಗೆ ಗ್ರಾಹಕರು ಪಟಾಕಿ ಖರೀದಿಗೆ ಆಗಮಿಸುತ್ತಿದ್ದಾರೆ. ಜಿಎಸ್​ಟಿ ಕಡಿಮೆಯಾದುದರಿಂದ ಪಟಾಕಿಗಳ ಬೆಲೆ ಅಧಿಕವಾಗಿಲ್ಲ. ನಮ್ಮಲ್ಲಿ 100 ರೂ.ನಿಂದ 3 ಸಾವಿರ ರೂ. ಬೆಲೆಯ ಪಟಾಕಿಗಳು ಲಭ್ಯವಿವೆ. > ವಿ.ಬಿ. ಮಣಿ ಕುಮಾರ್​, ವ್ಯಾಪಾರಿ, ಶ್ರೀನಿವಾಸನಗರ 15&20 ಸಾವಿರ ರೂ. ಬೆಲೆಯ ಪಟಾಕಿಗಳನ್ನು ಖರೀದಿ ಮಾಡುವ ಗ್ರಾಹಕರೊಬ್ಬರು ನಮಗೆ ಇದ್ದರು. ಈ ಬಾರಿ ಅವರ ಮಗನಿಗೆ ಶಾಲೆಯಲ್ಲಿ ಪಟಾಕಿ ಸಿಡಿಸಬಾರದೆಂದು ಪ್ರಮಾಣ ಮಾಡಲಾಗಿತ್ತೆಂದು, ಅವನ ಟೀಚರ್​ ಪಟಾಕಿ ಖರೀದಿಸಬೇಡಿ ಎಂದಿದ್ದರು ಎಂದು ಗ್ರಾಹಕರು ನಮಗೆ ತಿಳಿಸಿದ್ದಾರೆ. ಹೀಗೆ ಕೆಲವು ಮಂದಿ ಪಟಾಕಿಯಿಂದ ವಿಮುಖರಾಗುತ್ತಿದ್ದರೂ ಖರೀದಿಗೆ ಹೊಸ ಹೊಸ ಗ್ರಾಹಕರು ಬರುತ್ತಲೇ ಇದ್ದಾರೆ. ಸುಮಾರು 250&300 ವೈವಿದ್ಯಮಯ ಪಟಾಕಿಗಳು ನಮ್ಮಲ್ಲಿ ಲಭಿಸುತ್ತವೆ. ಈ ಬಾರಿ "ಲಯನ್​ ಪಟಾಕಿ' ವಿಶೇಷ ಗಮನ ಸೆಳೆದಿದೆ. > ವೈ.ಎಸ್​. ನಾಗೇಶ್​, ಗಾಂಧಿ ಬಜಾರ್​ ವ್ಯಾಪಾರಿ ಜಿಎಸ್​ಟಿ ಕಡಿಮೆ ಆಗಿರುವುದು ಪಟಾಕಿ ಖರೀದಿಗೆ ಅನುಕೂಲವಾಗಿದೆ. ನಾವು ಪ್ರತಿ ಬಾರಿ ಉದಯಭಾನು ಮೈದಾನದಲ್ಲೇ ಖರೀದಿಗೆ ಬರುತ್ತೇವೆ. 31 ಸಾವಿರ ರೂ. ಬೆಲೆಯ ಪಟಾಕಿಗಳನ್ನು ಕೇವಲ 11 ಸಾವಿರ ರೂ.ಗೆ ಇಲ್ಲಿ ಕೊಡುತ್ತಿದ್ದಾರೆ. ಪಟಾಕಿ ಖರೀದಿಗೆ ದೂರದ ಊರುಗಳಿಗೋ, ಗಡಿದಾಟಿ ಹೊಸೂರಿಗೆಲ್ಲ ಹೋಗಬೇಕಾದ ಅವಶ್ಯಕತೆ ಇಲ್ಲ. > ಪಂಕಜ್​ ಜೀನ್​, ವಿಶ್ವೇಶ್ವರಪುರ ಮಗಳಿಗೋಸ್ಕರ ಪಟಾಕಿಗಳನ್ನು ಖರೀದಿಸುತ್ತಿದ್ದೇನೆ. ಪರಿಸರಕ್ಕೆ ಯಾವುದೇ ಹಾನಿಯಾಗದ ರೀತಿ ಹಬ್ಬದ ಸಂಭ್ರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಸಿರು ಪಟಾಕಿಗಳನ್ನು ಖರೀದಿಸಿದ್ದೇನೆ. ಪಾಟಾಕಿ ಬೆಲೆಗಳು ಹೆಚ್ಚಾಯತು ಅನಿಸುತ್ತಿಲ್ಲ. ಆದರೆ, ಇವುಗಳನ್ನು ಸಿಡಿಸುವ ವೇಳೆ ಜಾಗ್ರತೆ ವಹಿಸಬೇಕಿರುವುದು ಅಗತ್ಯ. > ದೀತ್​, ಮಲ್ಲತ್ತಹಳ್ಳಿ ಬೆಳಕಿನ ಹಬ್ಬದ ರಂಗೇರಬೇಕೆಂದರೆ ಪಟಾಕಿ ಅಗತ್ಯ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು ಮಕ್ಕಳಿಗೆ ಖುಷಿಯೋ ಖುಷಿ. ಈ ಬಾರಿಯೂ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಪಟಾಕಿಗಳು ಲಭಿಸುತ್ತಿವೆ. ಬೆಲೆಯೂ ಅನುಕೂಲವಾಗಿದೆ. ಎಲ್ಲಡೆ ದೀಪಗಳನ್ನು ಹಚ್ಚಿ, ಪಟಾಕಿ ಸಿಡಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸೋಣ. > ಶಿವರಾಜ, ಕೆಂಗೇರಿ, ಗ್ರಾಹಕ