ಜಿಲ್ಲೆ

ಉಡುಪಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ

ಗೋಪಾಲಕೃಷ್ಣ ಪಾದೂರ್

ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಸೋಮವಾರ ಜಿಲ್ಲೆಯ ಹಲವೆಡೆ ದೇವಸ್ಥಾನ, ಮನೆಗಳಲ್ಲಿ ಬೆಳಗ್ಗೆ ಗೋಪೂಜೆ, ವಾಹನ ಪೂಜೆ ನೆರವೇರಿತು.

ವಿವಿಧ ದೇವಸ್ಥಾನಗಳ ಮುಂಭಾಗದಲ್ಲಿ ಜನರು ತಮ್ಮ ವಾಹನಗಳನ್ನು ಅಲಂಕರಿಸಿ, ಅರ್ಚಕರ ಮೂಲಕ ಪೂಜೆ ನೆರವೇರಿಸಿದರು. ದೇವಳಗಳು, ಗೋಶಾಲೆಗಳು, ಹಟ್ಟಿಗಳಲ್ಲಿ ಗೋಪೂಜೆ ನಡೆಯಿತು.

ಕೃಷ್ಣ್ಣಮಠದ ಕನಕನ ಕಿಂಡಿಯ ಮುಂಭಾಗದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪುರೋಹಿತ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಗೋಪೂಜೆ ನೆರವೇರಿತು. ನಂತರ ಗೋವುಗಳನ್ನು ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ದೇವರ ಸನ್ನಿಧಿಯಲ್ಲಿ ಗೋಪೂಜೆ ನಡೆಯಿತು. ದೇವಳದ ಅರ್ಚಕ ವಿನಾಯಕ ಭಟ್​ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ದೇವಳದ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ , ನರಹರಿ ಪೈ, ಶ್ರೀನಿವಾಸ ಕಾಮತ್​ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು. ಶಾಸಕ ಯಶ್ಪಾಲ್​ ಸುವರ್ಣ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಮಾಜಿ ಶಾಸಕ ರುಪತಿ ಭಟ್​ ಗೋಪೂಜೆ ನೆರವೇರಿಸಿದರು.

ನಗರದೆಲ್ಲೆಡೆ ಜನರು ಪಟಾಕಿ, ಅಗತ್ಯ ವಸ್ತುಗಳು, ಸಿಹಿತಿಂಡಿಗಳು, ವಸ ಖರೀದಿಯಲ್ಲಿ ನಿರತರಾಗಿದ್ದರು. ರಥಬೀದಿ, ಮಾರುಕಟ್ಟೆ, ಶಾಪಿಂಗ್​ಮಾಲ್​ಗಳು ತುಂಬಿತುಳುಕುತ್ತಿದ್ದವು. ಜನಸಂಚಾರ ಹೆಚ್ಚಿದ್ದ ಕಾರಣ ನಗರದ ವಿವಿಧೆಡೆ ವಾಹನ ದಟ್ಟಣೆ ಉಂಟಾಗಿತ್ತು.

ಕೃಷ್ಣ ಮಠಕ್ಕೆ 10 ಸಾವಿರ ಭಕ್ತರ ಭೇಟಿ
ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಕೃಷ್ಣಮಠಕ್ಕೆ ಭಕ್ತರ ದಂಡು ಹರಿದು ಬಂದಿದ್ದು, 10 ಸಾವಿರಕ್ಕೂ ಮಿಕ್ಕಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಧ್ಯಾಹ್ನ 8 ಸಾವಿರಕ್ಕೂ ಅಧಿಕ ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು.