ವಿಜಯವಾಣಿ ಸುದ್ದಿಜಾಲ ಹಾವೇರಿ
ಕರೊನಾ ಆತಂಕದ ನಡುವೆಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಜನತೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಹೊಸಬಟ್ಟೆ, ಹಬ್ಬದ ಪೂಜೆಗಾಗಿ ವಿವಿಧ ಸಾಮಗ್ರಿಗಳ ಖರೀದಿ ಜೋರಾಗಿದ್ದು, ಜಿಲ್ಲಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿದೆ.
ಹಬ್ಬಕ್ಕೆ ಮೆರಗು ನೀಡುವ ಬಗೆಬಗೆಯ ಆಕಾಶ ಬುಟ್ಟಿ, ಸಾಂಪ್ರದಾಯಿಕ ಮಣ್ಣಿನ ಹಣತೆಗೂ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ. ಬಣ್ಣ,ಬಣ್ಣದ ವಿಶಿಷ್ಟ ಆಕಾರದ ಆಕಾಶಬುಟ್ಟಿಗಳ ಸಾಲುಗಳು ಪ್ರಮುಖ ಆಕರ್ಷಣೆಯಾಗಿವೆ.
ಹಬ್ಬದ ಖುಷಿಗಾಗಿ ಮನೆ ಮಂದಿಗೆಲ್ಲ ಹೊಸ ಬಟ್ಟೆ ಖರೀದಿಸುವವರ ಸಂಖ್ಯೆಯೂ ಜೋರಾಗಿದೆ. ಜಾನುವಾರುಗಳಿಗೆ ಅಲಂಕಾರದ ಸಾಮಗ್ರಿಗಳಾದ ಮೂಗುದಾರ, ಜೂಲ, ಕೊಂಬೆಣಸು, ಹಗ್ಗ, ಹಣೆಕಟ್ಟು, ಗೆಜ್ಜೆಸರ, ಕೊಂಬಿಗೆ ಹಚ್ಚಲು ಬಗೆಬಗೆಯ ಬಣ್ಣ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ರೈತರು ನಿರತರಾಗಿದ್ದಾರೆ. ಶನಿವಾರ ನಗರದ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ದಿನಸಿ ಖರೀದಿ ಮುಂದುವರಿದಿತ್ತು. ಅಂಗಡಿಗಳಲ್ಲಿ ಜನದಟ್ಟಣೆಯೂ ಹೆಚ್ಚಿತ್ತು. ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ದಿನಸಿ ಹಾಗೂ ತರಕಾರಿ, ಹೂವು, ಹಣ್ಣಿನ ಬೆಲೆ ಗ್ರಾಹಕರಿಗೆ ಬಿಸಿಮುಟ್ಟಿಸಿದೆ. ಈ ಬಾರಿ ಪಟಾಕಿ ಸದ್ದಡಗಿದ್ದು, ಪಟಾಕಿ ಮಾರಾಟ ಮಳಿಗೆ ಆರಂಭಗೊಂಡಿದ್ದರೂ ಜನತೆ ಹೆಚ್ಚಿನ ಆಸಕ್ತಿ ತೋರದೆ ಇರುವುದು ಕಂಡುಬಂತು.
ಕರೊನಾದಿಂದ ನೆಲಕಚ್ಚಿದ್ದ ವ್ಯಾಪಾರ ವಹಿವಾಟು ದೀಪಾವಳಿ ಹಬ್ಬದಿಂದ ಚೇತರಿಕೆ ಕಂಡಿದೆ. ಬಟ್ಟೆ ಅಂಗಡಿಗಳಲ್ಲಿ ಜನದಟ್ಟಣೆ ಕಾಣುತ್ತಿದೆ. ಕರೊನಾ ಸೋಂಕು ಇಳಿಮುಖವಾಗಿದ್ದರಿಂದ ಮಾರುಕಟ್ಟೆಯಲ್ಲಿಯೂ ಜನ ಮೈಮರೆತಂತೆ ವರ್ತಿಸುತ್ತಿದ್ದಾರೆ. ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮ ಅನುಸರಿಸಲಿಲ್ಲ.
ಹಬ್ಬಕ್ಕೆ ಆಕಾಶಬುಟ್ಟಿ ಮೆರುಗು: ಕರೊನಾ ಭೀತಿಯ ನಡುವೆಯೂ ದೀಪಾವಳಿ ಹಬ್ಬದ ಆಚರಣೆಗೆ ನಗರ ಸೇರಿ ರಾಣೆಬೆನ್ನೂರ ತಾಲೂಕಿನಾದ್ಯಂತ ಭರದ ಸಿದ್ಧತೆ ನಡೆದಿದೆ. ಜನತೆ ಶುಕ್ರವಾರ ದೀಪಾವಳಿಗಾಗಿ ಆಕಾಶಬುಟ್ಟಿ, ಅಲಂಕಾರಿಕ ವಸ್ತು, ಹೊಸ ಬಟ್ಟೆ ಹಾಗೂ ಇತರ ಸಾಮಗ್ರಿಗಳನ್ನು ಖರೀದಿಸುವಲ್ಲಿ ಮಗ್ನರಾಗಿದ್ದಾರೆ.
ಹಬ್ಬಕ್ಕೆ ಮೆರುಗು ತರುವ ಆಕಾಶಬುಟ್ಟಿಗಳು ಮಾರುಕಟ್ಟೆಗೆ ಬಂದಿವೆ. ರಂಗುರಂಗಿನ ಬಣ್ಣಗಳುಳ್ಳ ವೈವಿಧ್ಯಯಮ ಆಕಾಶಬುಟ್ಟಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಸೂರ್ಯ, ಚಂದ್ರ, ನಕ್ಷತ್ರ, ಪಿರಾಮಿಡ್, ಭೂಗೋಳ ಸೇರಿ ವಿವಿಧ ವಿನ್ಯಾಸ ಇರುವ ಆಕರ್ಷಕ ಆಕಾಶಬುಟ್ಟಿಗಳು ರಾತ್ರಿ ಸಮಯದಲ್ಲಿ ಮನೆ, ಅಂಗಡಿ, ಕಟ್ಟಡಗಳ ಎದುರು ಮಿಂಚತೊಡಗಿವೆ.
ಪ್ಲಾಸ್ಟಿಕ್ ಆಕಾಶಬುಟ್ಟಿಗಳದ್ದೇ ಕಾರುಬಾರು: ದಶಕಗಳ ಹಿಂದೆ ಇಷ್ಟೊಂದು ಪ್ರಕಾರದ ಆಕಾಶಬುಟ್ಟಿಗಳಿರಲಿಲ್ಲ. ಬಣ್ಣದ ಹಾಳೆ ತಂದು ಬಿದಿರಿನ ಕಡ್ಡಿಗಳನ್ನು ಜೋಡಿಸಿ ಮನೆಯಲ್ಲಿಯೇ ಸುಂದರ ಆಕಾಶಬುಟ್ಟಿಗಳನ್ನು ತಯಾರಿಸಿ ಅದರೊಳಗೆ ಎಣ್ಣೆ ದೀಪವಿಟ್ಟು ಸಂಭ್ರಮಿಸುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಇದೊಂದು ಸಂಪ್ರದಾಯದಂತೆ ಆಚರಿಸಿಕೊಂಡು ಬಂದಿದ್ದಾರೆ. ಆದರೀಗ ಕಾಗದದ ಹಾಳೆ, ಬಿದಿರಿನ ಕಡ್ಡಿ ಜಾಗದಲ್ಲಿ ಪ್ಲಾಸ್ಟಿಕ್ ಹಾಳೆ, ಕಡ್ಡಿಗಳು ಆಕ್ರಮಣ ಮಾಡಿವೆ. ಮನೆಗಳಲ್ಲಿ ಆಕಾಶಬುಟ್ಟಿ ತಯಾರಿಸುವ ಸಂದರ್ಭದಲ್ಲಿ ಸ್ಥಳೀಯವಾಗಿಯೇ ದೊರೆಯುವ ಸಾಮಗ್ರಿಗಳನ್ನು ಬಳಸಿ ಆಕರ್ಷಕ ಆಕಾಶಬುಟ್ಟಿಗಳನ್ನು ತಯಾರಿಸುತ್ತಿದ್ದರು. ಎಲ್ಲರ ಮನೆ ಮನೆಗಳಲ್ಲಿ ಕಲಾ ಪ್ರೌಢಿಮೆ ಮೆರೆಯಲಾಗುತ್ತಿತ್ತು. ಆ ಸಂಭ್ರಮ ಈಗ ಮರೆಮಾಚಿದಂತಾಗಿದೆ.
ಬೆಲೆಯೂ ಹೆಚ್ಚು: ಈಗ ಆಕಾಶಬುಟ್ಟಿ ರಚಿಸುವ ಕಲೆ ಮಾಯವಾಗಿದ್ದು, ಮಹಾರಾಷ್ಟ್ರದ ಪುಣೆ, ಮುಂಬೈ ಸೇರಿ ಬೇರೆ ಬೇರೆ ರಾಜ್ಯಗಳ ವಾಣಿಜ್ಯ ನಗರಗಳಿಂದ ದುಬಾರಿ ವೆಚ್ಚದ ಸಿದ್ಧ ಆಕಾಶಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬೆಲೆಯಲ್ಲೂ ಹೆಚ್ಚಳವಾಗಿದ್ದು, ನೂರರಿಂದ ಸಾವಿರ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಪ್ಲಾಸ್ಟಿಕ್ನಿಂದ ತಯಾರಿಸಿದ ವೈವಿಧ್ಯಮಯ ಆಕಾಶಬುಟ್ಟಿಗಳು ಕಾಗದದ ಹಾಳೆಯಲ್ಲಿ ರಚಿತ ಆಕಾಶಬುಟ್ಟಿಗಳಿಂತ ಭಾರಿ ಆಕರ್ಷಿಕವಾಗಿದ್ದು, ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಆದ್ದರಿಂದ ಮಾರುಕಟ್ಟೆಯಲ್ಲಿ ಈಗ ಪ್ಲಾಸ್ಟಿಕ್ನಿಂದ ನಿರ್ವಿುತ ಆಕಾಶಬುಟ್ಟಿಗಳದ್ದೇ ಕಾರುಬಾರು ಎಂಬಂತಾಗಿದೆ.