ಜಿಲ್ಲೆ

ಪರಿಸರ ಸ್ನೇಹಿ ದೀಪಾವಳಿ ಬಗ್ಗೆ ಜಾಗೃತಿ ಕಾರ್ಯಕ್ರಮ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರ ತಾಲೂಕು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಪರಿಸರ ಜಾಗೃತಿ ಆಂದೋಲನ ಏರ್ಪಡಿಸಲಾಗಿತ್ತು. ಈ ಸಂದರ್ಭ ಹಸಿರು ದೀಪಾವಳಿ ಆಚರಣೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದ ಶಾಲೆಯ ಮುಖ್ಯ ಶಿಕ್ಷಕರೂ ಆದ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್‌ನ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ. ಪ್ರೇಮಕುಮಾರ್ ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಪರಿಸರ ವ್ಯವಸ್ಥೆಯ ಮೇಲೆ ಉಂಟಾಗುವ ದುಷ್ಪರಿಣಾಮಗಳು ಹಾಗೂ ಅನಾಹುತಗಳ ಬಗ್ಗೆ ವಿವರಿಸಿದರು.

ಪಟಾಕಿ ಸಿಡಿಸುವುದರಿಂದ ಉಂಟಾಗುವ ಶಬ್ದ, ವಾಯು ಹಾಗೂ ಜಲ ಮಾಲಿನ್ಯ, ನೆಲ ಮಾಲಿನ್ಯದ ಜತೆಗೆ ಪ್ರಾಣಿ - ಪಕ್ಷಿ ಜೀವ ಸಂಕುಲಗಳು ಸೇರಿದಂತೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿ ಪರಿಸರ ವ್ಯವಸ್ಥೆಗೂ ತೀವ್ರ ಧಕ್ಕೆಯುಂಟಾಗುತ್ತದೆ. ಈ ದಿಸೆಯಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಮಾಲಿನ್ಯಕಾರಿ ಪಟಾಕಿಗಳನ್ನು ತ್ಯಜಿಸಬೇಕಿದೆ. ಹಾಗಾಗಿ ಹಸಿರು ಪಟಾಕಿಗಳನ್ನು ರಾತ್ರಿ 8 ಗಂಟೆಯಿAದ ರಾತ್ರಿ 10 ಗಂಟೆ ತನಕ ಮಾತ್ರ ಸಿಡಿಸಲು ಅವಕಾಶ ನೀಡಲಾಗಿದೆ ಎಂದರು.

ಪಟಾಕಿ ಸಿಡಿತದಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಹಸಿರು ಪಟಾಕಿ ಬಳಕೆ ಕುರಿತು ಮಾಹಿತಿ ನೀಡಿದ ಶಾಲೆಯ ಇಕೋ ಕ್ಲಬ್‌ನ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯಾ, ದೀಪಾವಳಿ ಹಬ್ಬದ ಸಂದರ್ಭ ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಹಣತೆ ಬೆಳಗಿಸಬೇಕು ಎಂದರು.

ಶಾಲಾ ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಎಂ.ಟಿ. ದಯಾನಂದ ಪ್ರಕಾಶ್, ಬಿ.ಎನ್.ಸುಜಾತಾ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಸಿಬ್ಬಂದಿ ಎಂ.ಉಷಾ ಇದ್ದರು.