ಮಡಿಕೇರಿ:
ಪದಗಳ ತರ್ಜುಮೆಗಿಂತ ಭಾವನೆಗಳನ್ನು ದಾಖಲಿಸುವ ಭಾವಾನುವಾದ ಪ್ರಕಾರವು ಅನುವಾದ ಸಾಹಿತ್ಯದಲ್ಲಿ ಮಹತ್ವದ್ದಾಗಿರುತ್ತದೆ ಎಂದು ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಮಡಿಕೇರಿಯ ಲೇಖಕಿ ದೀಪಾ ಭಾಸ್ತಿ ಹೇಳಿದರು. ಕೊಡಗು ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಇಲ್ಲಿ ಆಯೋಜಿಸಿದ್ದ ದೀಪಾ ಭಾಸ್ತಿಗೆ ಅಭಿನಂದನಾ ಸಮಾರಂಭ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾನುಮುಷ್ತಾಕ್ ಅವರ ಎದೆಯ ಹಣತೆ ಕೃತಿ ಸೇರಿದಂತೆ 6 ಕಥಾಸಂಕಲನಗಳಲ್ಲಿನ 12 ಕಥೆಗಳನ್ನು ಆಯ್ಕೆ ಮಾಡಿ ಇಂಗ್ಲೀಷ್‌ನಲ್ಲಿ ಬರೆದ ಹಾರ್ಟ್ ಲ್ಯಾಂಪ್ ಕೃತಿ ಸಂಬAಧಿತ ಮಾಹಿತಿ ನೀಡಿದ ದೀಪಾ ಭಾಸ್ತಿ, ಕನ್ನಡದಿಂದ ಇಂಗ್ಲೀಷ್‌ಗೆ ಅನುವಾದ ಮಾಡುವಾಗ ಖಂಡಿತವಾಗಿಯೂ ಪದಗಳನ್ನು ತರ್ಜುಮೆ ಮಾಡಬಾರದು. ಇದರ ಬದಲಿಗೆ ಮೂಲ ಕೃತಿಯಲ್ಲಿನ ಪದಗಳ ಭಾವವನ್ನು ಅರ್ಥೈಸಿಕೊಂಡು ತನ್ನದೇ ಶೈಲಿಯಲ್ಲಿ ಭಾವಾನುವಾದ ಮಾಡಿದರಷ್ಟೇ ಅನುವಾದ ಸಾಹಿತ್ಯಕ್ಕೆ ಗಟ್ಟಿತನ ದೊರಕುತ್ತದೆ.
ಪಂಪ, ಕುವೆಂಪು ಸೇರಿದಂತೆ ಕನ್ನಡದ ಅನೇಕ ಸಾಹಿತಿಗಳ ಅತ್ಯಂತ ಶ್ರೇಷ್ಟ ಕೃತಿಗಳು ಇನ್ನಾದರೂ ಇಂಗ್ಲೀಷ್ ಗೆ ಅನುವಾದಗೊಂಡು ಜಾಗತಿಕವಾಗಿ ಓದುಗರನ್ನು ತಲುಪಬೇಕಾದ ಅಗತ್ಯವಿದೆ. 1,500 ವರ್ಷಗಳ ಇತಿಹಾಸವಿರುವ ಕನ್ನಡದ ಕೃತಿಗಳು ವಿಶ್ವವ್ಯಾಪಿ ಕನ್ನಡ ನೆಲದ ಸಾಹಿತ್ಯ ಕಂಪು ಬೀರಬೇಕಾಗಿದೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಲು ಇತರ ಭಾಷೆಗಳ ಶ್ರೇಷ್ಟ ಕೃತಿಗಳು ಕನ್ನಡಕ್ಕೆ ಅನುವಾದವಾಗಬೇಕಾದ ಅಗತ್ಯತೆಯಿದೆ.
ಡಾ. ಶಿವರಾಮ ಕಾರಂತರ ಅದೇ ಊರು - ಅದೇ ಮರ ಕೃತಿ ಮತ್ತು ಕೊಡಗಿನ ಗೌರಮ್ಮ ಅವರ ಕಥೆಗಳನ್ನು ಇಂದ್ಲೀಷ್‌ಗೆ ಅನುವಾದಿಸಿ ಅದು ಖ್ಯಾತಿ ಪಡೆಯುತ್ತಿದ್ದ ಸಂದರ್ಭವೇ ಭಾನುಮುಷ್ತಾಕ್ ತನ್ನ ಸ್ನೇಹಿತೆಯ ಮೂಲಕ ನನ್ನನ್ನು ಸಂಪರ್ಕಿಸಿ ತನ್ನ ಕಥೆಗಳನ್ನು ಇಂಗ್ಲೀಷ್ ಗೆ ಅನುವಾದಿಸುವಂತೆ ಕೋರಿದ್ದರು. ಹೀಗಾಗಿಯೇ ಅವರ ಎಲ್ಲಾ ಕಥಾಸಂಕಲನ ಓದಿ ತನಗೆ ಇಷ್ಟವಾದ 12 ಕಥೆಗಳನ್ನು ಆಯ್ದೆಕೊಂಡು ಹಾರ್ಟ್ ಲ್ಯಾಂಪ್ ಕೃತಿಯಾಗಿಸಿದೆ. ಅನುವಾದಕಳಾಗಿ ತನ್ನ ಮನಸ್ಸಿಗೆ ಇಷ್ಟವಾದ ಕಥೆಗಳನ್ನು ಮಾತ್ರ ಆಯ್ದುಕೊಂಡಿದ್ದೆ. ಹಲವು ಕಥೆಗಳು ಸುಂದರವಾಗಿದ್ದರೂ ಇಂಗ್ಲೀಷ್ ಓದುಗನಿಗೆ ಜಾನಪದ ಘಟನಾವಳಿಗಳ ಕಥಾ ಹಂದರವನ್ನು ತಲುಪಿಸುವುದು ಕಷ್ಟ ಎಂದನ್ನಿಸಿದ ಕಾರಣದಿಂದ ಅಂಥ ಕಥೆಗಳನ್ನು ಅನುವಾದದಿಂದ ಕೈಬಿಟ್ಟಿದ್ದೆ. ಆ ಸಂದರ್ಭ ಮಾರುಕಟ್ಟೆಗೆ ಇಂಥ ಕಥೆಗಳು ಸಲ್ಲುತ್ತವೆಯೇ ಎಂದು ಯೋಚಿಸುವ ಗೊಡವೆಗೆ ಹೋಗಲಿಲ್ಲ.
ಭಾನುಮುಷ್ತಾಕ್ ಅವರ ಕಥೆಗಳಲ್ಲಿ ಹೆಚ್ಚಾಗಿ ಮುಸ್ಲಿಮ್ ಸಮುದಾಯದ ಸಂಸ್ಕೃತಿ, ಆಚಾರಗಳ ಉಲ್ಲೇಖ ಇದ್ದುದರಿಂದಾಗಿ ಆ ಬಗ್ಗೆ ಕೂಲಂಕುಶವಾಗಿ ಅಧ್ಯಯನ ಮಾಡಿಯೇ ಹಾರ್ಟ್ ಲ್ಯಾಂಪ್ ಕೃತಿಯಲ್ಲಿ ಮೂಲ ಕಥೆಗಳಲ್ಲಿನ ಸಂಸ್ಕೃತಿ, ಆಚಾರ ವಿಚಾರಕ್ಕೆ ಧಕ್ಕೆಯಾಗದಂತೆ ಅನುವಾದ ಮಾಡಬೇಕಾದ ಸವಾಲು ತನಗಿತ್ತು.
ಬೂಕರ್ ಪ್ರಶಸ್ತಿಯ ಅಂತಿಮ ಹಂತದಲ್ಲಿ ಇಟಾಲಿಯನ್, ಡ್ಯಾನಿಷ್, ಫ್ರೆಂಚ್ ಭಾಷೆಗಳ ಕೃತಿಗಳೂ ಇದ್ದವು. ವಿಶ್ವದ ಪ್ರಸಿದ್ದ ಅನುವಾದಕರಾದ ಸೋಫಿ ಹಗ್ಗೀಸ್ ಅವರ ಕೃತಿಯೂ ಅಲ್ಲಿತ್ತು. ಹೀಗಿದ್ದರೂ ತೀರ್ಪುಗಾರರು ಸರಳ, ಮನಸ್ಸಿಗೆ ಮುಟ್ಟುವ ಭಾಷಾ ಮತ್ತು ಭಾವಾನುವಾದ ಮೆಚ್ಚಿಕೊಂಡು ಹಾರ್ಟ್ ಲ್ಯಾಂಪ್ ಅನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು.
ಹೆಗ್ಗೋಡು ಗ್ರಾಮದ ಸಮುದ್ಯತಾ ವೆಂಕಟರಾಮು ರಚಿಸಿರುವ ಇದೇ ಅಂದರೆ ಇದೆ, ಇಲ್ಲ ಎಂದರೆ ಇಲ್ಲ ಕೃತಿಯ ಇಂಗ್ಲೀಷ್ ಅನುದಾದ ಸಾಗಿದ್ದು, ಇದು ಕೂಡ ಬಹಳ ಸೊಗಸಾದ ಕೃತಿಯಾಗಲಿದೆ. ಅನುವಾದ ಸಾಹಿತ್ಯ ತಾನು ಮೆಚ್ಚಿಕೊಂಡು ಬರೆದ್ದದ್ದಲ್ಲ. ಸ್ವಂತ ಕೃತಿಯ ರಚನೆ ಕಾರ್ಯವೂ ಬಾಕಿಯಿದೆ. ಪ್ರಬಂಧ, ಸಣ್ಣ ಕಥೆಗಳು ತನ್ನ ಮೆಚ್ಚಿನ ಸಾಹಿತ್ಯವಾಗಿದೆ.
ಆಧುನಿಕ ತಂತ್ರಜ್ಞಾನದ ಮಾಧ್ಯಮಗಳಿರುವ ಈ ಕಾಲದಲ್ಲಿ ಖಂಡಿತವಾಗಿಯೂ ವಿಶ್ವವ್ಯಾಪಿ ಓದುಗರ ಸಂಖ್ಯೆ ಇಳಿಮುಖವಾಗಿಲ್ಲ. ಬದಲಿಗೆ ಜ್ಞಾನ ಪಡೆಯುವ ನಿಟ್ಟಿನಲ್ಲಿ ಉತ್ತಮ ಕೃತಿಗಳನ್ನು ಓದುವವರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಸಾಹಿತ್ಯ ಲೋಕಕ್ಕಿರುವ ಅತೀ ದೊಡ್ಡ ಭರವಸೆಯಾಗಿದೆ.
ಅಜ್ಜ ಡಾ. ನಂಜುAಡೇಶ್ವರ ಅವರ ಗ್ರಂಥಾಲಯದಲ್ಲಿದ್ದ ಅನೇಕ ಪುಸ್ತಕಗಳು ಬಾಲ್ಯದಲ್ಲಿಯೇ ಓದುವ ಆಸಕ್ತಿ ಹುಟ್ಟುಹಾಕಿತ್ತು. ತನ್ನ ದೊಡ್ಡಮ್ಮ ಕೂಡ ಲೇಖಕಿಯಾಗಿದ್ದು ತನಗೂ ಸ್ಫೂರ್ತಿ ನೀಡಿತ್ತು. ಮಡಿಕೇರಿಯ ಕೊಡಗು ವಿದ್ಯಾಲಯಲ್ಲಿ ದಿಕ್ಸೂಚಿ ವಾರ್ತಾ ಸಂಚಿಕೆ ಮೂಲಕ ಸಣ್ಣ ಪುಟ್ಟ ಕವನಗಳ ಮೂಲಕ ಬರವಣಿಗೆ ಪ್ರಾರಂಭಿಸಿದ್ದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಮಂಗಳ ಗಂಗೋತ್ರಿಯ ಪತ್ರಿಕೋದ್ಯಮ ಶಿಕ್ಷಣವೂ ಸಾಹಿತ್ಯದತ್ತ ಪ್ರೇರೇಪಿಸಿತ್ತು. ಇಂಗ್ಲೀಷ್ ಭಾಷಾ ಶಿಕ್ಷಣ ಪಡೆದ ಕಾರಣ ಇಂಗ್ಲೀಷ್ ಕೃತಿಗಳತ್ತ ಹೆಚ್ಚು ಆಕರ್ಷಿತನಾದೆ. ಹೀಗಿದ್ದರೂ ಕನ್ನಡದ ಪ್ರಮುಖ ಕೃತಿಗಳನ್ನು ಓದಿಕೊಂಡಿದ್ದೇನೆ ಎಂದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ ಅನಿಲ್ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಸಂಘದ ಸಲಹೆಗಾರ ಟಿ.ಪಿ.ರಮೇಶ್, ಬಿ.ಜಿ. ಅನಂತಶಯನ ಮತ್ತಿತರರು ಇದ್ದರು.