ಭಿತ್ತಿಪತ್ರ ಪ್ರದರ್ಶನದ ಬಗ್ಗೆ ಕುಮದ್ವತಿ ಸ್ನಾತಕೋತ್ತರ ಪದವಿ ಕಾಲೇಜಿನ ಸಂಯೋಜನಾಧಿಕಾರಿ ಕೆ.ಸಿ.ರವೀಂದ್ರ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.  
ಜಿಲ್ಲೆ

ಕಾಮರ್ಸ್‌ನಲ್ಲಿ ಬೇಕು ಆಳವಾದ ಅಧ್ಯಯನ

Shivamogga - Desk - Vinayakumar D B

ಶಿವಮೊಗ್ಗ: ವಾಣಿಜ್ಯ ವಿಭಾಗ ಎನ್ನುವುದು ಕೇವಲ ಉಳಿತಾಯ, ಖರ್ಚಿಗೆ ಸೀಮಿತವಾಗದೆ ಆಳವಾದ ಅಧ್ಯಯನ ಮಾಡಬೇಕು. ಅದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿದೆ ಎಂದು ಕುಮದ್ವತಿ ಸ್ನಾತಕೋತ್ತರ ಪದವಿ ಕಾಲೇಜಿನ ಸಂಯೋಜನಾಧಿಕಾರಿ ಕೆ.ಸಿ.ರವೀಂದ್ರ ಹೇಳಿದರು.

ಶಿಕಾರಿಪುರದ ಕುಮದ್ವತಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಗುರುವಾರ ಭಿತ್ತಿಪತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡು ಆ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿ ವಿವಿಧ ಕಂಪನಿಗಳ ಕಾರ್ಯದರ್ಶಿ, ಬ್ಯಾಂಕ್ ಮ್ಯಾನೇಜರ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದರು.
ಕಲಿಕೆಗೆ ಶ್ರದ್ಧೆ ಇದ್ದಾಗ ಅಭ್ಯಾಸ ಉತ್ತೇಜನವಾಗುತ್ತದೆ. ವಿದ್ಯಾರ್ಥಿಗಳಾದ ನಾವುಗಳು ಉಪನ್ಯಾಸಕರ ಮಾರ್ಗದರ್ಶನ ಹಾಗೂ ಅಂತರ್ಜಾಲದಿಂದ ಹೆಚ್ಚು ಅಧ್ಯಯನ ಮಾಡಬಹುದು. ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಅಭ್ಯಾಸದ ವಿಷಯಗಳಿಗೆ ಪೂರಕವಾಗಿರಬೇಕೇ ವಿನಾ ಮಾರಕವಾಗಬಾರದು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಣಿಜ್ಯ ವಿಭಾಗದ ಮುಖ್ಯಸ್ಥ ಚಂದ್ರಶೇಖರ್, ಮಕ್ಕಳ ಆಸಕ್ತಿ ಪ್ರೇರಣೆಗೆ ತಕ್ಕಂತೆ ಕಾರ್ಯಕ್ರಮ ಆಯೋಜಿಸಿ ಅವರ ಪ್ರತಿಭೆ ಗುರುತಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಭಿತ್ತಿಪತ್ರ ಪ್ರದರ್ಶನ ಮಾಡುವುದರ ಜತೆಗೆ ವಿಷಯ ಕರಗತ ಮಾಡಿಕೊಂಡ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ದೇವರಾಜ್, ನಾಗರತ್ನಾ, ರಂಜಿತಾ ಇದ್ದರು.