ಜಿಲ್ಲೆ

ಶುರುವಾಯ್ತು ಆಳ ಸಮುದ್ರ ಮೀನುಗಾರಿಕೆ, ಕುಡ್ಲದಲ್ಲಿ ಸಮುದ್ರಕ್ಕಿಳಿದ 50 ಬೋಟುಗಳು

ಮಂಗಳೂರು: ಎರಡು ತಿಂಗಳ ಮೀನುಗಾರಿಕಾ ರಜೆಯ ಬಳಿಕ ಸೋಮವಾರದಿಂದ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಆರಂಭವಾಗಿದೆ.

ಮಂಗಳೂರು ದಕ್ಕೆಯಿಂದ ಮೊದಲ ದಿನ 50ಕ್ಕೂ ಅಧಿಕ ಆಳ ಸಮುದ್ರ ಮೀನುಗಾರಿಕೆ ನಡೆಸುವ ಬೋಟ್‌ಗಳು ಸಮುದ್ರಕ್ಕೆ ಇಳಿದಿದ್ದು, ಕೆಲವು ಟ್ರಾಲ್ ಬೋಟ್‌ಗಳೂ ಮೀನುಗಾರಿಕೆಗೆ ತೆರಳಿವೆ. ಟ್ರಾಲ್ ಬೋಟ್‌ಗಳು 2-3 ದಿನ ಮೀನುಗಾರಿಕೆ ನಡೆಸಿ ಮರಳಲಿದ್ದು, ಆಳ ಸಮುದ್ರ ಬೋಟ್‌ಗಳು 8-10 ದಿನದ ಬಳಿಕ ದಕ್ಕೆಗೆ ಮರಳಲಿವೆ.

ಮಂಗಳವಾರ ಇನ್ನಷ್ಟು ಬೋಟ್‌ಗಳು ತೆರಳಲು ಉದ್ದೇಶಿಸಿವೆ. ಆದರೆ ಸಮುದ್ರದಲ್ಲಿ ಗಾಳಿ ಇರುವುದರಿಂದ ತೆರಳುವ ಸಾಧ್ಯತೆ ಕಡಿಮೆ. ಪ್ರಸ್ತುತ ತೆರಳಿರುವ ಟ್ರಾಲ್ ಬೋಟ್‌ಗಳು ಮೀನುಗಾರಿಕೆ ನಡೆಸಿ ಸದ್ಯದಲ್ಲೇ ಹಿಂತಿರುಗುವ ಸಾಧ್ಯತೆ ಇರುವುದರಿಂದ ದಕ್ಕೆಯಲ್ಲಿ ಶೀಘ್ರ ತಾಜಾ ಮೀನುಗಳು ದೊರೆಯಲಿದೆ.