ವಿಜಯವಾಣಿ ಸುದ್ದಿಜಾಲ ಉಡುಪಿ
ಉದಯೋನ್ಮುಖ ಭರತನಾಟ್ಯ ಕಲಾವಿದೆ ಬ್ರಹ್ಮಾವರ ತಾಲೂಕು ಮುಂಡ್ಕಿನಜಡ್ಡುವಿನ ವಿದುಷಿ ದೀಕ್ಷಾ ವಿ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸಂಕಲ್ಪ ತೊಟ್ಟಿದ್ದು, ಆಗಸ್ಟ್ 21ರಿಂದ ಆಗಸ್ಟ್ 30ರ ವರೆಗೆ ನವರಸ ದೀಕ್ಷಾ ವೈಭವಂ' ಭರತನಾಟ್ಯ ಪ್ರದರ್ಶನ ಆರಂಭಿಸಿದ್ದಾರೆ.
ಮಣಿಪಾಲದ ರತ್ನ ಸಂಜೀವ ಕಲಾ ಮಂಡಲದ ಪ್ರೋತ್ಸಾಹ ಹಾಗೂ ಸಹಕಾರದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ಆ.21ರಂದು ಮಧ್ಯಾಹ್ನ 3:30ಕ್ಕೆ ಸರಿಯಾಗಿ ಉಡುಪಿಯ ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ ಮಹಿಳಾ ಪದವಿ ಕಾಲೇಜಿನ ಪಿಜಿ ಸಭಾಭವನದಲ್ಲಿ ತನ್ನ ತಂದೆ-ತಾಯಿ, ಪತಿ ಹಾಗೂ ನೃತ್ಯ ಗುರುವಿಗೆ ನಮಸ್ಕರಿಸಿ ನಟರಾಜ ನಮನದ ಮೂಲಕ ದೀಕ್ಷಾ ವಿ., ಸಾಧನೆಯ ಹೆಜ್ಜೆ ಮೂಲಕ ಭರತನಾಟ್ಯ ಪ್ರಾರಂಭಿಸಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಮಾನದಂಡದಂತೆ ನೃತ್ಯ ಸಂಯೋಜನೆ ಮಾಡಲಾಗಿದೆ. ಹಗಲು-ರಾತ್ರಿ ನಡೆಯುವ ನೃತ್ಯದಲ್ಲಿ ಪ್ರತಿ ಮೂರು ಗಂಟೆಗೊಮ್ಮೆ15 ನಿಮಿಷ ವಿಶ್ರಾಂತಿ ಅಥವಾ ಪ್ರತಿ ಒಂದು ಗಂಟೆಗೊಮ್ಮೆ 5 ನಿಮಿಷ ವಿಶ್ರಾಂತಿ ಪಡೆಯಬಹುದಾಗಿದೆ. ಅತ್ಯಂತ ದೊಡ್ಡ ಸವಾಲಿನ ಈ ಸಾಧನೆಯ ಪ್ರತಿ ಸೆಕೆಂಡ್ನ ನೃತ್ಯವನ್ನು ಎರಡು ವಿಡಿಯೋ ಕ್ಯಾಮರಾ ಮೂಲಕ ದಾಖಲೀಕರಣ ಮಾಡಲಾಗುತ್ತಿದೆ. ಆ.30ರಂದು ಮಧ್ಯಾಹ್ನ 3:30ಕ್ಕೆ (ಒಟ್ಟು 216 ಗಂಟೆ) ನಿರಂತರ ಭರತನಾಟ್ಯ ಕೊನೆಗೊಳ್ಳಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ., ನೃತ್ಯ ಗುರು ವಿದ್ವಾನ್ ಶ್ರೀಧರ ರಾವ್ ಬನ್ನಂಜೆ, ಗೀತಾಂಜಲಿ ಸುವರ್ಣ, 24 ಗಂಟೆ ನಿರಂತರ ಹಾಡುವ ಮೂಲಕ ವಿಶ್ವ ದಾಖಲೆ ಮಾಡಿರುವ ಯಶವಂತ ಎಂಜಿ., ವಿದುಷಿ ಉಷಾ ಹೆಬ್ಬಾರ, ವಿದುಷಿ ವೀಣಾ ಹೆಬ್ಬಾರ, ಕಟಪಾಡಿ ಶಂಕರ ಪೂಜಾರಿ ಇತರರು ಮಾತನಾಡಿ, ವಿಶ್ವ ದಾಖಲೆ ನಿರ್ಮಿಸಲು ಹೊರಟ ದೀಕ್ಷಾ ಅವರಿಗೆ ದೇವರು ಶಕ್ತಿ, ದೈಹಿಕ ಕ್ಷಮತೆ ಹಾಗೂ ಆರೋಗ್ಯ ನೀಡಲಿ ಎಂದು ಹಾರೈಸಿದರು.
ಪ್ರೊ.ಡಾ. ನಿಕೇತನಾ, ಅಶ್ವಿನಿ ಮಹೇಶ ಠಾಕೂರ್, ತಂದೆ ವಿಠ್ಠಲ, ತಾಯಿ ಶುಭಾ, ಪತಿ ರಾಹುಲ್, ವೀಣಾ ಎಸ್. ಶೆಟ್ಟಿ ಇತರರು ಉಪಸ್ಥಿತರಿದ್ದರು. ಮಹೇಶ ಠಾಕೂರ್ ಸ್ವಾಗತಿಸಿದರು. ರಾಮಚಂದ್ರ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.
ಭರತನಾಟ್ಯ ನನ್ನಪ್ಯಾಶನ್. 24 ಗಂಟೆ ನಿರಂತರ ಹಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದ ಯಶವಂತ ಎಂ.ಜಿ. ಅವರ ಸಾಧನೆ ನನಗೆ ಪ್ರೇರಣೆ. ನಾನೂ ಸಹ ಭರತನಾಟ್ಯದಲ್ಲಿ ಸಾಧನೆ ಮಾಡಬೇಕೆಂಬ ಹಿನ್ನೆಲೆಯಲ್ಲಿ ನನ್ನ ನೃತ್ಯ ಗುರುಗಳ ಮಾರ್ಗದರ್ಶನದಲ್ಲಿ 216 ಗಂಟೆಗಳ ಕಾಲ ಎಲ್ಲ ನೃತ್ಯ ಪ್ರಕಾರ, ಭಜನೆಗಳಿಗೂ ಹೆಜ್ಜೆ ಹಾಕಲಿದ್ದೇನೆ. ಸಾಧನೆಗೆ ಎಲ್ಲರ ಪ್ರೋತ್ಸಾಹ, ಆಶೀರ್ವಾದ ಯಾಚಿಸುತ್ತೇನೆ. | ದೀಕ್ಷಾ ವಿ. ಭರತನಾಟ್ಯ ವಿದುಷಿ