ಜಿಲ್ಲೆ

ಭರತನಾಟ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ ದೀಕ್ಷಾ ವಿ.

ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ ಪ್ರದಾನ

ಸಾರ್ವಜನಿಕ ಸಮ್ಮಾನದಲ್ಲಿ ಪಾಲ್ಗೊಂಡ ಡಿಕೆಶಿ

ವಿಜಯವಾಣಿ ಸುದ್ದಿಜಾಲ ಉಡುಪಿ

ನಿರಂತರ 9ದಿನ (216 ಗಂಟೆ)ಗಳ ಕಾಲ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ನೃತ್ಯ ವಿದುಷಿ ದೀಕ್ಷಾ ವಿ. ಅವರು ವಿಶ್ವದಾಖಲೆ ಮಾಡಿದ್ದಾರೆ.

ಉಡುಪಿಯಲ್ಲಿ ಆಗಸ್ಟ್​ 30ರಂದು ಸಂಜೆ ನಡೆದ ಸಮಾರಂಭದಲ್ಲಿ ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ ಪ್ರಶಸ್ತಿಯನ್ನು ಏಷ್ಯಾ ಹೆಡ್​ ಮನೀಶ್​ ಬಿಷ್ಣೋಯ್​ ಪ್ರದಾನ ಮಾಡಿದ್ದು, ದೀಕ್ಷಾ ಅವರ ವಿಶ್ವ ದಾಖಲೆಯನ್ನು ಘೋಷಿಸಿ, ಪ್ರಮಾಣ ಪತ್ರ ನೀಡಿದರು.

ಮಣಿಪಾಲದ ರತ್ನ ಸಂಜೀವ ಕಲಾ ಮಂಡಲದ ಸಹಭಾಗಿತ್ವದಲ್ಲಿ ಉಡುಪಿಯ ಡಾ. ಜಿ. ಶಂಕರ್​ ಮಹಿಳಾ ಪದವಿ ಕಾಲೇಜಿನಲ್ಲಿ ಆ.21ರ ಮಧ್ಯಾಹ್ನ 3 ಗಂಟೆಯಿಂದ ನವರಸ ದೀಕ್ಷಾ ವೈಭವಂ ನೃತ್ಯ ಆರಂಭಿಸಿದ್ದರು. ಆ.29ರಂದು ಮಧ್ಯಾಹ್ನ 3 ಗಂಟೆಗೆ ಭರತನಾಟ್ಯ ಮುಕ್ತಾಯಗೊಂಡಿತ್ತು.

ಡಿ.ಕೆ. ಶಿವಕುಮಾರ್​ ಮೆಚ್ಚುಗೆ

ಡಿಸಿಎಂ ಡಿ.ಕೆ. ಶಿವಕುಮಾರ ಅವರು ಭರತನಾಟ್ಯ ಸಮಾರೋಪ ಹಾಗೂ ವಿಶ್ವ ದಾಖಲೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡರು. ಸಾಧಕಿಗೆ ಸಾರ್ವಜನಿಕ ಸನ್ಮಾನ ಮಾಡಿ ಮಾತನಾಡಿ, ತುಳುನಾಡಿನ ಹೆಮ್ಮೆಯ ಭರತನಾಟ್ಯ ಪ್ರತಿಭೆ ವಿದುಷಿ ದೀಕ್ಷಾ ವಿ. ಅವರು 216 ಗಂಟೆಗಳ ಕಾಲ ನಿರಂತರ ನಾಟ್ಯ ಪ್ರದರ್ಶಿಸಿ ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ ಕೀರ್ತಿಗೆ ಪಾತ್ರರಾಗಿರುವುದನ್ನು ಕೇಳಿ ಅತೀವ ಸಂತಸವಾಗಿದೆ. ಅವರಿಗೆ ನಾನು ಹೃದಯಾಂತರಾಳದ ಅಭಿನಂದನೆ ಸಲ್ಲಿಸುತ್ತೇನೆ. ಇದು ಉಡುಪಿಗಷ್ಟೇ ಅಲ್ಲ, ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್​ಪಾಲ್​ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಮಾಜಿ ಶಾಸಕ ಕೆ.ರಘುಪತಿ ಭಟ್​, ಪ್ರಸಾದರಾಜ್ ಕಾಂಚನ್, ದೀಕ್ಷಾ ಅವರ ಪತಿ ರಾಹುಲ್​, ರತ್ನ ಸಂಜೀವ ಕಲಾ ಮಂಡಲ ಅಧ್ಯಕ್ಷ ಮಹೇಶ್​ ಠಾಕೂರ್​, ಕಲಾ ಗುರುಗಳಾದ ವಿದ್ವಾನ್​ ಶ್ರೀಧರ್​ ರಾವ್​ ಬನ್ನಂಜೆ ಇತರರು ಉಪಸ್ಥಿತರಿದ್ದರು.