ಬೆಳ್ತಂಗಡಿ: ದಲಿತ ಮುಖಂಡ ಹಾಗೂ ಸಾಹಿತಿ ಪಿ. ಡೀಕಯ್ಯ ಸಾವು ಪ್ರಕರಣದ ತನಿಖೆ ಸಲುವಾಗಿ ಸಿಐಡಿ ಪೊಲೀಸರ ತಂಡ ಗುರುವಾರ ಬೆಳ್ತಂಗಡಿಗೆ ಆಗಮಿಸಿದೆ.
ಸಿಐಡಿ ಇನ್‌ಸ್ಪೆಕ್ಟರ್ ಶಿವರಾಜ್ ನೇತೃತ್ವದಲ್ಲಿ ಮೂವರು ಪೊಲೀಸರು ಗುರುವಾರ ಬೆಂಗಳೂರಿನಿಂದ ಬೆಳ್ತಂಗಡಿ ಠಾಣೆಗೆ ಆಗಮಿಸಿ ಎಸೈ ನಂದಕುಮಾರ್ ಅವರಿಂದ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ. ಮಂಗಳೂರಿನ ಎಫ್‌ಎಸ್‌ಎಲ್ ತಂಡದ ಜತೆ ಗರ್ಡಾಡಿಯಲ್ಲಿರುವ ಡೀಕಯ್ಯ ಅವರ ಮನೆಯಲ್ಲೂ ಪರಿಶೀಲನೆ ನಡೆಸಿದ್ದಾರೆ.
ಕಳೆದ ಜು.6ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ಪಿ. ಡೀಕಯ್ಯ ಕುಸಿದು ಬಿದ್ದು ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಈ ಸಂದರ್ಭ ತಲೆಯ ಹಿಂದೆ ಗಾಯವಾಗಿದ್ದನ್ನು ಕಂಡು ಡೀಕಯ್ಯ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಜು.9ರಂದು ಬೌದ್ಧ ಧರ್ಮದ ಪ್ರಕಾರ ಹುಟ್ಟೂರು ಕಣಿಯೂರು ಗ್ರಾಮದ ಪೊಯ್ಯದಲ್ಲಿ ದಫನ ನಡೆದಿತ್ತು.
ಆ ಬಳಿಕ ಡೀಕಯ್ಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮನೆಯವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಜುಲೈ 18ರಂದು ಬೆಳ್ತಂಗಡಿ ತಹಸೀಲ್ದಾರ್ ನೇತೃತ್ವದಲ್ಲಿ ಶವ ಹೊರತೆಗೆದು ಪರೀಕ್ಷೆ ಮಾಡಲಾಗಿತ್ತು. ಘಟನೆ ಬಗ್ಗೆ ಪೊಲೀಸರು ಹಲವರನ್ನು ತನಿಖೆಗೆ ಗುರಿಪಡಿಸಿದ್ದರು. ಈ ನಡುವೆ ಡೀಕಯ್ಯ ಕುಟುಂಬಸ್ಥರು ಪೊಲೀಸರ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ನವೆಂಬರ್ 4ರಂದು ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತ್ತು.