ಜಿಲ್ಲೆ

ಜು.23ರಂದು ಪ್ರಾರ್ಥನಾ ಮಂದಿರ ಲೋಕಾರ್ಪಣೆ: ಕುಂಬಳಗೂಡು ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿಕೆ

ಮಂಡ್ಯ: ದಕ್ಷಿಣ ಕರ್ನಾಟಕದಲ್ಲಿಯೇ ಪ್ರಥಮ ಎನಿಸಿಕೊಂಡಿರುವ ರಾಮನಗರ ಜಿಲ್ಲೆ ಕನಕಪುರ ತಾಲೂಕು ಸಾತನೂರು ಹೋಬಳಿ ದಾಳಿಂಬ ಗ್ರಾಮದಲ್ಲಿ ನಿರ್ಮಿಸಿರುವ ಗುರು ಬಸವೇಶ್ವರ ಪ್ರಾರ್ಥನಾ ಮಂದಿರದ ಲೋಕಾರ್ಪಣೆ ಸಮಾರಂಭ ಜು.23ರಂದು ಆಯೋಜಿಸಲಾಗಿದೆ ಎಂದು ಕುಂಬಳಗೂಡು ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಅಂದು ಗುರು ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬಸವ ಮಂಟಪಕ್ಕೆ ಭೂದಾನ ದಾಸೋಹಿ ಶರಣ ರಾಮಣ್ಣನವರ 11ನೇ ವರ್ಷದ ಲಿಂಗೈಕ್ಯ ಸಂಸ್ಮರಣೆ ಅಂಗವಾಗಿ ಗುರುಮಕ್ಕಳ ಸಮಾವೇಶವಿರಲಿದೆ. ಅಂದು ಬೆಳಗ್ಗೆ 10.30ಕ್ಕೆ ಕುಂಬಳಗೂಡು ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಮರಳವಾಡಿ ಬಸವಗುರುಕುಲದ ಮೃತ್ಯುಂಜಯ ಸ್ವಾಮೀಜಿ ಬಸವ ಧ್ವಜಾರೋಹಣ ಮಾಡಲಿದ್ದಾರೆ. ರಂಗಕಲಾವಿದ ಎಸ್.ವಿ.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಂದಿನ ಲೋಕಸಭೆ ಚುನಾವಣೆಯೊಳಗೆ ನಾಗಮೋಹನ್‌ದಾಸ್ ವರದಿಯನ್ನು ಪರಿಗಣಿಸಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು. ಇಲ್ಲದಿದ್ದರೆ ದೇಶಾದ್ಯಂತ ಹೋರಾಟ ಮಾಡಲಾಗುವುದು. ಧರ್ಮದ ಮಾನ್ಯತೆ ಬಗ್ಗೆ ಹಲವು ವರ್ಷದಿಂದ ಕೇಂದ್ರ ಮತ್ತು ರಾಜ್ಯಸರ್ಕಾರ ನಿರ್ಲಕ್ಷೃ ವಹಿಸುತ್ತಿದೆ. ಇನ್ನಾದರೂ ನನೆಗುದಿಗೆ ಬಿದ್ದಿರುವ ಮಾನ್ಯತೆಯ ಹೋರಾಟವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ನ್ಯಾಯ ಕಲ್ಪಿಸಿಕೊಡಬೇಕು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಮಾನ್ಯತೆಗೆ ಸಂಬಂಧಿಸಿದ ಒಂದು ಸಾವಿರ ಪುಟಗಳ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದ್ದರು. ಆದರೆ ಅದನ್ನು ಕೆಲ ಕಾರಣವೊಡ್ಡಿ ವಾಪಸ್ ಕಳುಹಿಸಲಾಗಿದೆ. ಆದ್ದರಿಂದ ಇದೀಗ ಮತ್ತೊಮ್ಮೆ ವರದಿಯನ್ನು ಕಳುಹಿಸಬೇಕೆಂದು ಒತ್ತಾಯಿಸಿದರು.

ಲಿಂಗಾಯತ ಮಹಾಸಭಾ ಟ್ರಸ್ಟ್‌ನ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ಶರಣ ಶಿವಲಿಂಗಯ್ಯ, ನಂದೀಶ್, ಚಂದ್ರಶೇಖರ್ ಇದ್ದರು.