ಬಾಳೆಹೊನ್ನೂರು ವಿದ್ಯಾಗಣಪತಿಗೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.  
ಜಿಲ್ಲೆ

ಭಗವಂತ, ಜನ ಸೇವೆಗೆ ದೇಹ ಮುಡಿಪಿಡಿ

ಬಾಳೆಹೊನ್ನೂರು: ಮಾನವನ ದೇಹ ಸೃಷ್ಟಿಯ ಕೊಡುಗೆ. ಭಗವಂತನಿಂದ ಪಡೆದ ದೇಹವನ್ನು ದೇವರ ಸೇವೆಗೆ ಮುಡಿಪಾಗಿಡಬೇಕು ಎಂದು ಎನ್.ಆರ್.ಪುರ ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.

ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿ 65ನೇ ವರ್ಷದ ಗಣೇಶೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಲೆನಾಡಿನ ಜನರು ಭಕ್ತಿಯಲ್ಲಿ ಎಲ್ಲರಿಗಿಂತ ಒಂದು ಕೈ ಮುಂದಿದ್ದು, ಭಗವಂತನ ಸೇವೆಗಾಗಿ ಹಲವು ಕೊಡುಗೆಗಳನ್ನು ನೀಡುತ್ತಿದ್ದಾರೆ. ಭಗವಂತನ ಸನ್ನಿಧಿಯಲ್ಲಿ ಸೇವಾ ಕಾರ್ಯಗಳಿಗೆ ಸಮರ್ಪಣೆ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಮಲೆನಾಡಿನ ಜನರು ಪ್ರಕೃತಿಯಲ್ಲಿ ಭಗವಂತನನ್ನು ಕಂಡಿದ್ದು, ಮರಗಿಡಗಳನ್ನು ಪೂಜನೀಯವಾಗಿ ನೋಡುವ ಮೂಲಕ ಪ್ರಕೃತಿ ರಕ್ಷಣೆಯನ್ನೂ ಮಾಡುತ್ತ ದೈವಾರಾಧನೆಯಲ್ಲೂ ತೊಡಗಿದ್ದಾರೆ. ಧಾರ್ಮಿಕ ಕಾರ್ಯಗಳೊಂದಿಗೆ ಇಲ್ಲಿನ ಭಕ್ತರು ಸಾಮಾಜಿಕ ಕಾರ್ಯಗಳನ್ನೂ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ನಂಬಿಕೆ, ಕೃಪೆ ಮಧ್ಯ ಹಣೆಬರಹ ಎಂಬ ಅಂತರವಿದ್ದು, ಇದನ್ನು ನಮ್ಮ ಸಂಚಿತ ಪಾಪ, ಪುಣ್ಯಗಳ ಮೂಲಕ ಹಣೆಬರಹ ತುಂಬಿಕೊಳ್ಳಬಹುದು. ನಾವು ಮಾಡುವ ಕೆಲಸಗಳ ಮೂಲಕ ಹಣೆಬರಹ ನಮಗೆ ಲಭಿಸಲಿದೆ. ಭಗವಂತ ಎಂದಿಗೂ ತಾರತಮ್ಯ ಮಾಡುವುದಿಲ್ಲ. ಧಾರ್ಮಿಕ ಕಾರ್ಯಗಳಲ್ಲಿ ನಿರಂತರ ತೊಡಗಿಕೊಂಡರೆ ಭಗವಂತ ನಮ್ಮ ಕೈಬಿಡುವುದಿಲ್ಲ. ಭಗವಂತನ ಸನ್ನಿಧಾನದಲ್ಲಿ ನಮ್ಮ ಸಮಸ್ಯೆಗಳನ್ನು ನಾವೇ ಅವಲೋಕನ ಮಾಡಿಕೊಂಡರೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ನಾಡಿಗೆ ಅನ್ನ ನೀಡುವ ರೈತರು ಅತಿವೃಷ್ಟಿ, ಅನಾವೃಷ್ಟಿಗಳ ಕಾರಣದಿಂದ ಸಮಸ್ಯೆ ಎದುರಿಸುತ್ತಿದ್ದು, ಕೆಲವು ರೈತರು ತೀವ್ರ ಸಂಕಷ್ಟಗಳಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರ ಪರಿಹಾರೋಪಾಯ ಕೈಗೊಂಡರೂ ರೈತರ ಆತ್ಮಹತ್ಯೆ ನಿಲ್ಲುತ್ತಿಲ್ಲ. ರೈತರ ಮಕ್ಕಳಿಗೆ ಶ್ರೇಯಸ್ಸು ಲಭಿಸಲಿ ಎಂಬ ಪಾರ್ಥನೆ ಎಲ್ಲರದ್ದಾಗಿರಬೇಕು ಎಂದರು.
ಮಂಗಳೂರು ಾದರ್ ಮುಲ್ಲರ್ ಆಸ್ಪತ್ರೆ ಸೀನಿಯರ್ ಫಿಜಿಶಿಯನ್ ಡಾ. ಬಿ.ಎಂ.ವೆಂಕಟೇಶ್ ಮಾತನಾಡಿ, ವೈದ್ಯಕೀಯ ವೃತ್ತಿ ಭಗವಂತನ ವೃತ್ತಿಯಾಗಿದ್ದು, ವೈದ್ಯಕೀಯ ರಂಗದಲ್ಲಿ ನಂಬಿಕೆಯಿಟ್ಟು ಕೆಲಸ ಮಾಡಿದರೆ ಸಂತೃಪ್ತಿ ಸಾಧ್ಯ. ಆಧ್ಯಾತ್ಮಿಕ ಕೊಂಡಿ ಕಳಚಿಕೊಂಡು ಯಾರೂ ಸಾಧನೆ ಮಾಡಲು ಸಾಧ್ಯವಿಲ್ಲ. ಕೆಲಸವನ್ನು ದೇವರ ಕೆಲಸ ಎಂದು ನಂಬಿದರೆ ಸಾಧನೆ ಮಾಡಲು ಸಾಧ್ಯ. ಅಧ್ಯಾತ್ಮ, ವಿಜ್ಞಾನ ಒಂದಕ್ಕೊಂದು ಸರಪಳಿ ಇದ್ದಂತೆ. ಆಧ್ಯಾತ್ಮಿಕ ಸ್ಪರ್ಶ ಎಲ್ಲದಕ್ಕೂ ಇರಲೇಬೇಕಿದೆ ಎಂದರು.
ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಟಿ.ಆರ್.ಧರ್ಮಪ್ಪಗೌಡ, ಶಾಸಕ ಟಿ.ಡಿ.ರಾಜೇಗೌಡ, ಗಣಪತಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಬಿ.ಕೆ.ಮಧುಸೂದನ್, ಕಾರ್ಯದರ್ಶಿ ಸುರೇಂದ್ರ, ಸಿ.ವಿ.ಸುನೀಲ್, ಸಲಹೆಗಾರ ಹಿರಿಯಣ್ಣ, ಪ್ರಮುಖರಾದ ಸುಧಾಕರ್, ಜಯರಾಂ, ಟಿ.ಎಂ.ಉಮೇಶ್, ಎಂ.ಎಸ್.ಜಯಪ್ರಕಾಶ್, ಕೆ.ಎಸ್.ಹರೀಶ್, ನಾರಾಯಣಗೌಡ, ಟಿ.ಎಂ.ನಾಗೇಶ್, ಕೆ.ಕೆ.ವೆಂಕಟೇಶ್, ತ್ರಿವಿಕ್ರಮಭಟ್ ಮನುಕುಮಾರ್ ಇತರರಿದ್ದರು.