ಜಿಲ್ಲೆ

ನಿದ್ದೆಗೆಡಿಸಿದ ಮಳೆ ಕಣ್ಣಾಮುಚ್ಚಾಲೆ: ರೈತರಿಗೆ ಮತ್ತೆ ಕಾಡುತ್ತಿದೆ ಆತಂಕ, ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಕುಂಠಿತ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಆಶಾದಾಯಕವಾಗಿದ್ದ ಕಾಣಿಸಿದರೂ ರೈತರಿಗೆ ಆತಂಕ ಕಾಡುವಂತಾಗಿದೆ. ಕಾರಣ ನಿರೀಕ್ಷೆಯಂತೆ ನಿರಂತರವಾಗಿ ಮಳೆಯಾಗುತ್ತಿಲ್ಲ. ಒಮ್ಮೆ ಬಂದರೆ ಮೂರ‌್ನಾಲ್ಕು ದಿನ ಸುಳಿವೇ ಇರದಂತಾಗುತ್ತಿದೆ. ಪರಿಣಾಮ ಬಿತ್ತನೆ ಪ್ರಮಾಣ ಕುಂಠಿತವಾಗುವಂತೆ ಮಾಡಿದೆ.
ಪ್ರಸ್ತುತ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗುತ್ತಿದೆ. ಆದರೆ ಬೀಳುತ್ತಿರುವ ಮಳೆ ಕೃಷಿಗೆ ಪೂರಕವಾಗಿಲ್ಲ. ಒಂದು ದಿನ ಮಳೆ ಸುರಿದ ಬಿಡುವು ನೀಡುತ್ತಿರುವುದರಿಂದ ಭೂಮಿ ಕೃಷಿ ಚಟುವಟಿಕೆಗೆ ಹೊಂದಿಕೊಳ್ಳುತ್ತಿಲ್ಲ. ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜದ ದಾಸ್ತಾನಿದ್ದರೂ ನಿರೀಕ್ಷೆ ಮಾಡಿದಷ್ಟು ಬೇಡಿಕೆ ಇಲ್ಲ.
ಶೇ.6.4ರಷ್ಟು ಬಿತ್ತನೆ ಪೂರ್ಣ: ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಬಿತ್ತನೆ ಮಾಡಲು ರೈತರು ಯೋಚಿಸುವಂತಾಗಿದೆ. ಇದರಿಂದಾಗಿ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಯಷ್ಟು ಬಿತ್ತನೆ ಪ್ರಕ್ರಿಯೆ ನಡೆಯುತ್ತಿಲ್ಲ. ಅಂದರೆ ಜೂ.6ರವರೆಗೆ ಜಿಲ್ಲೆಯಲ್ಲಿ ಶೇ.6.4ರಷ್ಟು ಮಾತ್ರ ಬಿತ್ತನೆ ಕೆಲಸ ನಡೆದಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ಶೇ.8ರಷ್ಟು ಬಿತ್ತನೆ ಮುಗಿದಿತ್ತು.
ಜಿಲ್ಲೆಯ ಕೃಷಿ ಚಟುವಟಿಕೆ ನೋಡುವುದಾದರೆ ಪೂರ್ವ ಮುಂಗಾರಿನಲ್ಲಿ ಮಳೆಯನ್ನಾಧರಿಸಿ ಎಳ್ಳು, ಅಲಸಂಧೆ, ಕಬ್ಬು ಬೆಳೆ ಬಿತ್ತನೆ ಪ್ರಕ್ರಿಯೆ ನಡೆಯುತ್ತದೆ. ಆದರೆ ಈ ವರ್ಷ ಮೂರು ಬೆಳೆಯ ಬಿತ್ತನೆ ಪ್ರಮಾಣ ಗಮನಿಸಿದರೆ ಇಳಿಮುಖವಾಗಿದೆ. ಈವರೆಗೆ 14,357 ಹೆಕ್ಟೇರ್‌ನಲ್ಲಿ ಅಲಸಂಧೆ ಬಿತ್ತನೆಯಾಗಬೇಕಿತ್ತಾದರೂ 7,632 ಹೆಕ್ಟೇರ್‌ನಷ್ಟು ಆಗಿದೆ. ಅಂತೆಯೇ 5,180 ಹೆಕ್ಟೇರ್‌ನಲ್ಲಿ ಎಳ್ಳು ಬಿತ್ತನೆಯಾಗಬೇಕಿತ್ತು. ಮಳೆಯ ಅಭಾವದಿಂದಾಗಿ ಕೇವಲ 1,762 ಹೆಕ್ಟೇರ್‌ಗೆ ಇಳಿದಿದೆ. ಇನ್ನು 42,145 ಹೆಕ್ಟೇರ್‌ನಲ್ಲಿ ಕಬ್ಬಿನ ಬಿತ್ತನೆಯಾಗಬೇಕಿತ್ತು. ಮತ್ತೆ ಮಳೆ ಕೈಕೊಡಬಹುದೆಂಬ ಆತಂಕ ರೈತರನ್ನು ಕಾಡುತ್ತಿರುವುದರಿಂದ ಶೇ.4.7ರಷ್ಟು ಅಂದರೆ 1,989 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆಯಾಗಿದೆ. ಒಟ್ಟಾರೆ ಈ ಹಂಗಾಮಿನಲ್ಲಿ 1,92,693 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿದ್ದು, ಈವರೆಗೆ 12,268 ಹೆಕ್ಟೇರ್‌ನಲ್ಲಿ ಬಿತ್ತನೆ ಪ್ರಕ್ರಿಯೆ ನಡೆದಿದೆ.
ಡಯಂಚಗೆ ಭಾರೀ ಡಿಮಾಂಡ್: ಕಳೆದೊಂದು ವರ್ಷದಿಂದ ಭೀಕರ ಬರಗಾಲದ ಕಾರಣ ಕೃಷಿ ಭೂಮಿ ಸ್ಥಿತಿ ಹದಗೆಟ್ಟಿದೆ. ಇದನ್ನು ಮತ್ತೆ ಸರಿದಾರಿಗೆ ತರಲು ರೈತರ ಒಂದಷ್ಟು ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಡಯಂಚ ಅಥವಾ ಹಸಿರೆಲೆ ಗೊಬ್ಬರವನ್ನು ಬಿತ್ತನೆ ಮಾಡಲು ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಇದರಿಂದಾಗಿ ಬೇರೆ ಬಿತ್ತನೆ ಬೀಜಕ್ಕಿಂತ ಡಯಂಚ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಆದರೆ ಬೇಡಿಕೆಗೆ ಹೋಲಿಸಿದರೆ ಪೂರೈಕೆ ಪ್ರಮಾಣ ಕಡಿಮೆ. ಜಿಲ್ಲೆಗೆ ಸುಮಾರು 8 ಸಾವಿರ ಕ್ವಿಂಟಾಲ್‌ನಷ್ಟು ಡಯಂಚ ಬಿತ್ತನೆ ಬೀಜದ ಅವಶ್ಯಕತೆ ಇದೆ. ಆದರೆ ಈವರೆಗೆ 1,100 ಕ್ವಿಂಟಾಲ್‌ನಷ್ಟು ಮಾತ್ರ ಪೂರೈಕೆಯಾಗಿದೆ. ಅದು ಕೂಡ ರೈತ ಸಂಪರ್ಕ ಕೇಂದ್ರಕ್ಕೆ ಸರಬರಾಜಾದ ಕೆಲವೇ ಗಂಟೆಯಲ್ಲಿ ಖಾಲಿಯಾಗಿದೆ. ಇನ್ನು ಕೆಲ ದಿನದಲ್ಲಿ 700 ಕ್ವಿಂಟಾಲ್‌ನಷ್ಟು ಪೂರೈಕೆಯಾಗುವ ನಿರೀಕ್ಷೆ ಇದೆ. ಡಯಂಚ ಬಿತ್ತನೆ ಬೀಜವನ್ನು ಖಾಸಗಿಯಾಗಿ ಖರೀದಿಸಿದರೆ ಪ್ರತಿ ಕೆ.ಜಿಗೆ 90 ರೂ ಇದೆ. ಇಲಾಖೆಯಿಂದ ಸಹಾಯಧನ ರೂಪದಲ್ಲಿ ಪ್ರತಿ ಕೆ.ಜಿಗೆ 41 ರೂನಂತೆ ತಲಾ ರೈತರಿಗೆ 10 ಕೆ.ಜಿ ನೀಡಲಾಗಿದೆ.

ಏಳು ದಿನದಲ್ಲಿ 45.5 ಮಿ.ಮೀ ಮಳೆ
ಜಿಲ್ಲೆಯಲ್ಲಿ ಮೇ.31ರಿಂದ ಜೂ.6ರವರೆಗೆ 24.9 ಮಿ.ಮೀ ವಾಡಿಕೆ ಮಳೆಗೆ 45.5 ಮಿ.ಮೀ ಮಳೆ ಸುರಿದಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ 42.9 ಮಿ.ಮೀ, ಮದ್ದೂರಿನಲ್ಲಿ 35.8 ಮಿ.ಮೀ, ಮಳವಳ್ಳಿಯಲ್ಲಿ 31.4 ಮಿ.ಮೀ, ಮಂಡ್ಯದಲ್ಲಿ 75 ಮಿ.ಮೀ, ನಾಗಮಂಗಲದಲ್ಲಿ 56 ಮಿ.ಮೀ, ಪಾಂಡವಪುರದಲ್ಲಿ 3.4 ಮಿ.ಮೀ, ಶ್ರೀರಂಗಪಟ್ಟಣ ತಾಲೂಕಿನಲ್ಲಿ 28.9 ಮಿ.ಮೀ ಮಳೆಯಾಗಿದೆ. ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ನಗರ, ಪಟ್ಟಣದಲ್ಲಿ ಜೋರು ಮಳೆಯಾಗುತ್ತಿದೆಯೇ ಹೊರತು ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿಲ್ಲ.